ಬೆಂಗಳೂರು:ಕೌಟುಂಬಿಕ ಕಲಹದಿಂದ ಬೇಸತ್ತು ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದ ಮಹಿಳಾ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನೆಲದೆಗರಹಳ್ಳಿಯಲ್ಲಿ ನಡೆದಿದೆ.
ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೋಜಾ ತನ್ನ ಮೊದಲ ವರ್ಷದ ವಾರ್ಷಿಕೋತ್ಸವದಂದೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿವಾಹಿತೆ. ಕಳೆದ ಒಂದು ವರ್ಷದ ಹಿಂದೆ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್ ಎಂಬುವವನೊಂದಿಗೆ ಪೋಷಕರು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದರು.
ಮದುವೆಯಾದ ದಿನದಿಂದಲೂ ದಂಪತಿ ಅನ್ಯೋನ್ಯವಾಗಿರಲಿಲ್ಲ. ಗಂಡ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರೆ ಹೆಂಡತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ನೆಲಗೆದರಹಳ್ಳಿಯ ಗೃಹಲಕ್ಷ್ಮೀ ಲೇಔಟ್ನಲ್ಲಿ ರೋಜಾಳ ಅತ್ತೆ ಮನೆಯಿತ್ತು. ತಡರಾತ್ರಿ ಕೆಲಸ ಮುಗಿಸಿ ಅತ್ತೆ ಮನೆಗೆ ಹೋದರೆ ಮನೆ ಬಾಗಿಲು ತೆಗೆಯದೇ ಕಿರುಕುಳ ನೀಡುತ್ತಿದ್ದರಂತೆ. ಹೀಗಾಗಿ ಪ್ರತ್ಯೇಕವಾಗಿ ಪಿ.ಜಿ.ಯಲ್ಲಿ ರೋಜಾ ವಾಸವಾಗಿದ್ದರು.
ಕಳೆದ ಎರಡು ದಿನಗಳ ಹಿಂದೆ ಗಂಡ ವಿಕಾಸ್ ನೆಲಗೆದರಹಳ್ಳಿಯಲ್ಲಿರುವ ತಾಯಿ ಮನೆಗೆ ಬಂದಿದ್ದಾನೆ. ಈ ವೇಳೆ, ಹೆಂಡತಿ ರೋಜಾ ಸಹ ಅತ್ತೆ ಮನೆಗೆ ಬಂದಿದ್ದಾರೆ. ಈ ನಡುವೆ ಏನಾಯಿತೋ ಗೊತ್ತಿಲ್ಲ. ಆದರೆ ಇಂದು ಬೆಳಗ್ಗೆ ಮನೆಯ ಬಾತ್ ರೂಮಿನಲ್ಲಿ ರೋಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೋಜಾ ಮೂರು ತಿಂಗಳು ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ. ಮಗಳ ಸಾವಿಗೆ ಗಂಡನ ಮನೆಯವರೇ ಕಾರಣ ಎಂದು ಆರೋಪಿಸಿ ತಂದೆ ರಾಮಕೃಷ್ಣರೆಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.