ಕರ್ನಾಟಕ

karnataka

ETV Bharat / state

8 ವಾರ್ಡ್​ಗಳಲ್ಲಿ ಕಸ ಗುತ್ತಿಗೆದಾರರಿಂದ ಕಳಪೆ ಪ್ರದರ್ಶನ: ನೊಟೀಸ್ ಜಾರಿಗೆ ಬಿಬಿಎಂಪಿ ಸಿದ್ಧತೆ

ಕಳಪೆ ಕಸ ನಿರ್ವಹಣೆ ಮಾಡುತ್ತಿರುವ 8 ವಾರ್ಡ್​ಗಳ ಗುತ್ತಿಗೆದಾರರಿಗೆ ಬಿಬಿಎಂಪಿ ನೋಟೀಸ್ ನೀಡಲು ಮುಂದಾಗಿದೆ. ಒಂದು ವಾರದಲ್ಲಿ ಕೆಲಸದಲ್ಲಿ ಸುಧಾರಣೆ ಕಾಣದಿದ್ದರೆ ಟೆಂಡರ್ ರದ್ದು ಮಾಡಲು ಪಾಲಿಕೆ ನಿರ್ಧರಿಸಿದೆ ಎಂದು ತಿಳಿಸಿದರು.

bbmp
ಬಿಬಿಎಂಪಿ

By

Published : Nov 10, 2020, 9:21 PM IST

ಬೆಂಗಳೂರು: ಬಿಬಿಎಂಪಿ ಇತ್ತೀಚೆಗೆ ಜಾರಿ ಮಾಡಿರುವ ಪ್ರತ್ಯೇಕ ಹಸಿ ಕಸ ಟೆಂಡರ್ ಜಾರಿಯಿಂದಲೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಬಿಬಿಎಂಪಿ ಒಪ್ಪಂದದಲ್ಲಿ ತಿಳಿಸಿರುವ ನಿಯಮಗಳನ್ನು ಗಾಳಿಗೆ ತೂರಿದ ಗುತ್ತಿಗೆದಾರರು, ಕಳಪೆಯಾಗಿ ಕಸ ನಿರ್ವಹಣೆ ಮಾಡುತ್ತಿದ್ದಾರೆ. ಈ ಸಂಬಂಧ 8 ವಾರ್ಡ್​ಗಳ ಗುತ್ತಿಗೆದಾರರಿಗೆ ಬಿಬಿಎಂಪಿ ನೋಟೀಸ್ ನೀಡಲು ಮುಂದಾಗಿದೆ.

ಈ ಕುರಿತು ಮಾತನಾಡಿದ ಬಿಬಿಎಂಪಿ ಘನತ್ಯಾಜ್ಯ ವಿಶೇಷ ಆಯುಕ್ತ ಡಿ. ರಂದೀಪ್, ಕಳಪೆ ಕಸ ನಿರ್ವಹಣೆ ಮಾಡುತ್ತಿರುವ 8 ವಾರ್ಡ್​ಗಳ ಗುತ್ತಿಗೆದಾರರಿಗೆ ಬಿಬಿಎಂಪಿ ನೋಟೀಸ್ ನೀಡಲು ಮುಂದಾಗಿದೆ. ಒಂದು ವಾರದಲ್ಲಿ ಕೆಲಸದಲ್ಲಿ ಸುಧಾರಣೆ ಕಾಣದಿದ್ದರೆ ಟೆಂಡರ್ ರದ್ದು ಮಾಡಲು ಪಾಲಿಕೆ ನಿರ್ಧರಿಸಿದೆ ಎಂದು ತಿಳಿಸಿದರು.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಬಿಬಿಎಂಪಿ ಘನತ್ಯಾಜ್ಯ ವಿಶೇಷ ಆಯುಕ್ತ ಡಿ.ರಂದೀಪ್

ಹೊಸ ಟೆಂಡರ್ ಜಾರಿಯಾದ 38 ವಾರ್ಡ್​ಗಳ ಪೈಕಿ 10 ವಾರ್ಡ್​ಗಳಲ್ಲಿ‌ ಮಾತ್ರ ಸರಿಯಾದ ಕೆಲಸ ನಡೆಯುತ್ತಿದೆ. ಐದಾರು ವಾರ್ಡ್​ಗಳಲ್ಲಿ ತುಂಬಾ ಕಳಪೆ ಕೆಲಸ ಮಾಡುತ್ತಿದ್ದಾರೆ. ನಿಗದಿತ ಸಂಖ್ಯೆಗಿಂತ ಕಡಿಮೆ ಗಾಡಿಗಳನ್ನು ಕಳುಹಿಸುತ್ತಿದ್ದಾರೆ. ಜಿಪಿಎಸ್ ಹಾಕಿ, ಮಾಹಿತಿ ನೀಡದ ಕಾರಣ ಪಾಲಿಕೆಗೆ ಟ್ರಾಕ್ ಮಾಡಲು ಆಗುತ್ತಿಲ್ಲ ಎಂದು ಹೇಳಿದರು.

ಬಿಬಿಎಂಪಿಯ 198 ವಾರ್ಡ್​ಗಳ ಪೈಕಿ 38 ವಾರ್ಡ್​ಗಳಲ್ಲಿ ಪ್ರತ್ಯೇಕ ಹಸಿಕಸ ಟೆಂಡರ್ ಜಾರಿಗೆ ತರಲಾಗಿದೆ. ನಿರ್ವಹಣೆ ವೆಚ್ಚ ಕಡಿಮೆ ಮಾಡುವುದು ಹಾಗೂ ವಾರ್ಡ್​ಗಳನ್ನು ಕಸಮುಕ್ತಗೊಳಿಸುವ ನಿರೀಕ್ಷೆ ಇಡಲಾಗಿತ್ತು. ಅಲ್ಲದೆ ಕಸ ನಿರ್ವಹಣೆಯನ್ನು ಬಿಬಿಎಂಪಿ ಕೇಂದ್ರ ಕಚೇರಿಯಿಂದ ಪ್ರತೀ ದಿನ ಗಮನಿಸಲಾಗುತ್ತದೆ. ಹೀಗಾಗಿ ಆಟೋಟಿಪ್ಪರ್, ಕಾಂಪ್ಯಾಕ್ಟರ್​ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲು ಒಪ್ಪಂದದಲ್ಲಿ ತಿಳಿಸಲಾಗಿತ್ತು. ಆದರೆ ಹಲವಾರು‌ ಗುತ್ತಿಗೆದಾರರು ಈ ಕ್ರಮ ಅಳವಡಿಸಿಕೊಂಡಿಲ್ಲ ಎಂದರು.

ಕಳಪೆ ಕೆಲಸ ಮಾಡುತ್ತಿರುವ ವಾರ್ಡ್​ಗಳು
ಶಿವಾಜಿನಗರ - 92ನೇ ವಾರ್ಡ್
ಕೆಆರ್ ಪುರಂ - 52ನೇ ವಾರ್ಡ್
ರಾಯಪುರಂ - 137ನೇ ವಾರ್ಡ್
ಚಲವಾದಿಪಾಳ್ಯ -138ನೇ ವಾರ್ಡ್
ಆಜಾದ ನಗರ- -141ನೇ ವಾರ್ಡ್
ಯಡಿಯೂರು- 167ನೇ ವಾರ್ಡ್
ಹೊಸಕರೆಹಳ್ಳಿ- 161ನೇ ವಾರ್ಡ್
ಕೆ.ಆರ್. ಪುರಂ- 52ನೇ ವಾರ್ಡ್

ಈ ವಾರ್ಡ್​ಗಳಲ್ಲಿ ಕಸದ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ನೊಟೀಸ್ ನೀಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಈ ಹಿಂದೆ ಸಪ್ಲೈ ಆರ್ಡರ್​ನಲ್ಲಿ ಟೆಂಡರ್‌ ನಡೆಯುತ್ತಿತ್ತು. ಈಗ ಕೇಂದ್ರ ಕಚೇರಿಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ. ಈ ಪ್ರಕಾರ, ವಾರ್ಡ್​ಗಳಲ್ಲಿ ಸರಿಯಾದ ರೀತಿಯಲ್ಲಿ ಕಸ ನಿರ್ವಹಣೆ ಮಾಡದಿದ್ದರೆ ಕೆಲಸ ಸ್ಥಗಿತ ಮಾಡಲು ಶೋಕಾಸ್ ನೊಟೀಸ್​ ನೀಡಲಾಗುವುದು ಹಾಗೂ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದರು.

ಮಾರ್ಷಲ್ಸ್​ಗಳ ಮೂಲಕ ಪರಿಶೀಲನೆ ನಡೆಸಿದಾಗ ಕೆಲವು ಕಡೆ ಗುತ್ತಿಗೆದಾರರು ಆಸಕ್ತಿಯೇ ತೋರಿಸುತ್ತಿಲ್ಲ. ಎಲ್ಲೆಲ್ಲಿ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂಬುದರ ಕುರಿತು ವರದಿ ತರಿಸಿಕೊಳ್ಳಲಾಗಿದೆ. ಸುಧಾರಣೆ ಮಾಡಿಕೊಳ್ಳದಿದ್ದರೆ ಅಂತಹ ಕಡೆ ಮರು ಟೆಂಡರ್ ಕರೆಯಲಾಗುವುದು ಎಂದರು.

ABOUT THE AUTHOR

...view details