ಬೆಂಗಳೂರು:ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ ಯಲಹಂಕ ಪ್ರಮುಖ ಸ್ಥಳವಾಗಿದೆ. ಸದ್ಯ ರಾಜಕೀಯವಾಗಿ ಈ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಪ್ರಸ್ತುತ ಶಾಸಕರಾಗಿರುವ ಎಸ್.ಆರ್. ವಿಶ್ವನಾಥ್ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದೀಗ ಮತ್ತೆ ಚುನಾವಣೆ ಬರುತ್ತಿದ್ದು, ಅಖಾಡ ರೆಡಿಯಾಗುತ್ತಿದೆ. ಸದ್ಯಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಹಾಗಾಗಿ, ಬಿಜೆಪಿಯ ಎಸ್.ಆರ್. ವಿಶ್ವನಾಥ್ ಅವರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕುವವರು ಯಾರು? ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಆಕಾಂಕ್ಷಿಗಳಿಗೇನು ಕೊರತೆ ಇಲ್ಲ.
ಬೆಂಗಳೂರು ಉತ್ತರ ತಾಲೂಕಿಗೆ ಸೇರುವ ಯಲಹಂಕ ಕೆಲ ಹಳ್ಳಿಗಳನ್ನೂ ಒಳಗೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಯಲಹಂಕ ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ವಿಮಾನ ನಿಲ್ದಾಣಕ್ಕೆ ಇದೇ ಮಾರ್ಗವಾಗಿ ತೆರಳಬೇಕು. ಹಾಗಾಗಿ, ಸಂಚಾರ ದಟ್ಟಣೆ ಯಾವಾಗಲೂ ಇದ್ದೇ ಇರುತ್ತದೆ. ಇಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹೆಚ್ಚು ಸಕ್ರಿಯವಾಗಿದೆ.
ಅದರ ಜೊತೆಗೆ ಗಾರ್ಮೆಂಟ್ ಉದ್ಯಮ, ವಿದೇಶಿ ಕಂಪನಿಗಳು ಈ ಭಾಗದಲ್ಲಿ ಹೆಚ್ಚು ಇವೆ. ಯಲಹಂಕದಲ್ಲಿ ಅಟ್ಟೂರು ಲೇಔಟ್, ಸೋಮೇಶ್ವರ ವಾರ್ಡ್, ಕೆಂಪೇಗೌಡ ವಾರ್ಡ್, ಯಲಹಂಕ ಸ್ಯಾಟಲೈಟ್ ಟೌನ್ ವಾರ್ಡ್, ಚೌಡೇಶ್ವರಿ ವಾರ್ಡ್, ಕಡಬಗೆರೆ, ಕಾಚೋಹಳ್ಳಿ, ವಡೇರಹಳ್ಳಿ, ರಾಜಾನುಕುಂಟೆ, ಹೆಗ್ಗಡದೇವನಪುರ, ಹೆಸರುಘಟ್ಟ, ಕೋಗಿಲು, ವೆಂಕಟಾಲ ಗ್ರಾಮ ಸೇರಿದಂತೆ ಇನ್ನು ಹಲವು ಪ್ರದೇಶಗಳನ್ನು ಈ ಕ್ಷೇತ್ರ ಒಳಗೊಂಡಿದ್ದು, ಬಡವರು, ವ್ಯಾಪಾರಿಗಳು, ಮಧ್ಯಮ ವರ್ಗ ಹಾಗೂ ಮೇಲ್ವರ್ಗದವರು ನೆಲೆಸಿದ್ದಾರೆ.
ಹೆಚ್ಎಎಲ್ ಉದ್ಯೋಗಿಯಾಗಿದ್ದ ಎಸ್.ಆರ್. ವಿಶ್ವನಾಥ್ ಅವರು, ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವರು, 2008 ರಲ್ಲಿ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದು ಗೆದ್ದಿದ್ದರು. ನಂತರ 2013, 2018ರ ಚುನಾವಣೆಯಲ್ಲಿ ಜಯಭೇರಿ ಸಾಧಿಸುವುದರ ಜೊತೆಗೆ ಮತಗಳ ಗಳಿಕೆ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ. ಇದರಿಂದಾಗಿ ಬಿಜೆಪಿ ಈ ಬಾರಿಯೂ ಅವರನ್ನೇ ನೆಚ್ಚಿಕೊಂಡಿದೆ.