ಬೆಂಗಳೂರು :ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಏಕಾಏಕಿ ಪೊಲೀಸರ ಮೇಲೆರಗಿ ಪರಾರಿಯಾಗಲು ಯತ್ನಿಸಿದಾಗ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ಬ್ಯಾಟರಾಯನದೊಡ್ಡಿಯ ಆರೋಪಿ ಸೋಮಶೇಖರ್ ಎಂಬಾತನನ್ನು ಬೆಳಗ್ಗೆ ಸ್ಥಳ ಮಹಜರಿಗೆ ಕರೆದೊಯ್ದಾಗ ಈ ಘಟನೆ ಸಂಭವಿಸಿದೆ.
ಪೊಲೀಸ್ ಸಿಬ್ಬಂದಿ ಮಾದಪ್ಪ ಎಂಬುವರ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆರೋಪಿಯನ್ನು ಉಳಿದ ಪೊಲೀಸರು ಸುತ್ತುವರೆದರು. ಬಳಿಕ, ಅವರ ಮೇಲೂ ಹಲ್ಲೆಗೆ ಮುಂದಾದಾಗ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್, ಪಿಸ್ತೂಲ್ನಿಂದ ಸೋಮನ ಎಡ ಗಾಲಿಗೆ ಗುಂಡು ಹಾರಿಸಿದರು. ಗುಂಡೇಟು ತಿಂದ ಆರೋಪಿಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.
ಏನಿದು ಪ್ರಕರಣ? : ಬ್ಯಾಟರಾಯನದೊಡ್ಡಿಯ ಮನೆಯಿಂದ ಹೊರಹೋಗಿದ್ದ 38 ವರ್ಷದ ಮಹಿಳೆಯನ್ನು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಬಳಿಕ, ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು. ಪ್ರಕರಣ ಸಂಬಂಧ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಮೊರೆತ ; ದರೋಡೆಕೋರನಿಗೆ ಗುಂಡೇಟು