ಬೆಂಗಳೂರು: ನೀತಿ ಸಂಹಿತೆ ಜಾರಿ ನಡುವೆಯೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 18 ಕೆಜಿ ಬೆಳ್ಳಿ ವಸ್ತುಗಳನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸರ, ಉಂಗುರ, ಕೈ ಖಡ್ಗ ಸೇರಿದಂತೆ ವಿವಿಧ ಮಾದರಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚುನ್ನಿಲಾಲ್ ಹಾಗೂ ಇಂದ್ರಕುಮಾರ್ ಎಂಬುವರು ಇಂದು ಬೆಳಗ್ಗೆ ಹಲಸೂರಿನ ಆರ್ಟಿಲರಿ ರೋಡ್ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಬೆಳ್ಳಿ ಸಾಮಾನುಗಳು ಪತ್ತೆಯಾಗಿವೆ.
ಕೂಡಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಜ್ಯೂವೆಲ್ಲರಿ ಶಾಪ್ವೊಂದಕ್ಕೆ ತೆಗದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣವಾಗಿರುವುದರಿಂದ ಠಾಣಾ ಜಾಮೀನಿನ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಬೆಳ್ಳಿ ಸಾಮಾನುಗಳನ್ನು ಮರಳಿ ಪಡೆಯಲು ಕೋರ್ಟ್ನಲ್ಲಿ ದಾಖಲಾತಿ ಒದಗಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
₹ 20 ಲಕ್ಷ ಬೆಳ್ಳಿ ವಸ್ತು ಸೀರೆ ವಶ : ಇನ್ನೊಂದೆಡೆ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 20 ಲಕ್ಷ ರೂ. ಹಾಗೂ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ 48 ಕೆಜಿ ಬೆಳ್ಳಿ, ವಿವಿಧ ಉಡುಪು, ಬಟ್ಟೆಗಳು ಸೇರಿ ಸುಮಾರು 42 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪೊಲೀಸರು ಮಾರ್ಚ್ 27ರಂದು ಜಪ್ತಿ ಮಾಡಿಕೊಂಡಿದ್ದರು.