ಬೆಂಗಳೂರು: ನಗರದಲ್ಲಿ ಸುಮಾರು ಏಳು ಸಾವಿರ ಜನರಿಗೆ ವಂಚನೆ ಎಸಗಿದ್ದ ಕ್ಯೂನೆಟ್ ಕಂಪನಿಯು ಮತ್ತೆ ಜನರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಭೆಗೆ ವಿಧಾನಸೌಧ ಪೊಲೀಸರು ದಾಳಿ ನಡೆಸಿದ್ದಾರೆ.
ಕ್ಯೂನೆಟ್ ಹಾಗೂ ವಿಹಾನ್ ಕಂಪನಿ ಹೆಸರಿನಲ್ಲಿ ಇಂದು ವಸಂತ ನಗರದ ಕ್ವೀನ್ಸ್ ರಸ್ತೆಯ ಪರ್ಲ್ ಬ್ಯಾಂಕ್ವೆಡ್ ಹಾಲ್ನಲ್ಲಿ ಆಯೋಜಿಸಿದ್ದ ಸಭೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಮುನ್ಸೂಚನೆ ಅರಿತಿದ್ದ ಆಯೋಜಕರು ಪೊಲೀಸರು ಕಾಲಿಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಕ್ಯೂನೆಟ್ ಕಂಪನಿ ಮೀಟಿಂಗ್ ವೇಳೆ ಪೊಲೀಸರ ದಾಳಿ ಸಭೆ ಸೇರಿದ್ದ 150ಕ್ಕೂ ಹೆಚ್ಚು ಜನರಿಗೆ ಕ್ಯೂನೆಟ್ ಮೋಸದ ಜಾಲ ಮನವರಿಕೆ ಮಾಡಿ ಪೊಲೀಸರು ಕಳುಹಿಸಿದ್ದಾರೆ. ಜನರಿಗೆ ಟೋಪಿ ಹಾಕುವ ಕ್ಯೂನೆಟ್ ಹಾಗೂ ವಿಹಾನ್ ಕಂಪನಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಮತ್ತೆ ಸರಣಿ ಸಭೆ ನಡೆಸುತ್ತಿದೆ.
ಫೋನ್ ಮೂಲಕ ಕಂಪನಿಯ ಏಜೆಂಟರು ಟೆಕ್ಕಿಗಳನ್ನು ಸಂಪರ್ಕಿಸಿ ನಗರದ ವಿವಿಧೆಡೆ ಸಭೆ ಕರೆದು ಕಂಪನಿಯಲ್ಲಿ ಹಣ ಹೂಡುವಂತೆ ಪ್ರಚೋದಿಸುತ್ತಾರೆ ಎನ್ನಲಾಗಿದೆ.
ಈಗಾಗಲೇ ಕಂಪನಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿವೆ. ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೋಸದ ಜಾಲವಿದೆ. ಸದ್ಯ ಕ್ಯೂನೆಟ್ ಕಂಪನಿಯ ವಂಚನೆ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.