ಬೆಂಗಳೂರು:ಕೊರೊನಾ ಹಿನ್ನೆಲೆ ತಮ್ಮ ನಿವಾಸದ ಬಳಿಯ ಕಚೇರಿ ಮುಂದೆ ಅನ್ನದಾನ ಮಾಡುತ್ತಿದ್ದ ಚಲವಾದಿಪಾಳ್ಯ ವಾರ್ಡ್ ಮಾಜಿ ಮಹಿಳಾ ಕಾರ್ಪೊರೇಟರ್ ಮೇಲೆ ಏಕಾಏಕಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ರೇಖಾ ಕದಿರೇಶ್ ಹಲ್ಲೆಗೆ ಒಳಗಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕಾಟನ್ ಪೇಟೆ ಪೊಲೀಸರು ತಿಳಿಸಿದ್ದಾರೆ.
ಕಚೇರಿ ಸಿಸಿಟಿವಿ ಮೇಲಕ್ಕೆ ತಿರುಗಿಸಿ ಮಾಜಿ ಕಾರ್ಪೋರೇಟರ್ ಹತ್ಯೆ ನಡೆದಿದ್ದೇನು?:ಮನೆಗೆ ಹೊಂದಿಕೊಂಡಂತಿರುವ ತಮ್ಮ ಕಚೇರಿ ಬಳಿ ಆಹಾರ ಪೊಟ್ಟಣ ಹಂಚುವಾಗ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಕುತ್ತಿಗೆ ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ರೇಖಾರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಈ ಮಾಹಿತಿಯನ್ನು ಕಾಟನ್ ಪೇಟೆ ಪೊಲೀಸರಿಗೆ ತಿಳಿಸಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಎಫ್ಎಸ್ಎಲ್ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.
ಕೊಲೆಗೆ ಕಾರಣವೇನು ?: 2018 ರಲ್ಲಿ ಕಾರ್ಪೊರೇಟರ್ ಆಗಿದ್ದ ಕದಿರೇಶ್ ಎಂಬುವರನ್ನು ನಡುರಸ್ತೆಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅದಾದ ಮೂರು ವರ್ಷದ ಬಳಿಕ ರೇಖಾ ಅವರನ್ನು ಕೊಲೆ ಮಾಡಿದ್ದಾರೆ. ರಾಜಕೀಯ ಹಾಗೂ ಕೌಟುಂಬಿಕ ಕಲಹ ಈ ಘಟನೆಗೆ ಕಾರಣವಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಸ್ಥಳಿಯರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೊಲೆ ಮಾಡುವ ಉದ್ದೇಶದಿಂದ ಕಚೇರಿ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾವನ್ನು ಮೇಲಕ್ಕೆ ತಿರುಗಿಸಿರುವುದು ಕಂಡು ಬಂದಿದೆ. ಮೆಲ್ನೋಟಕ್ಕೆ ಕೊಲೆಗೆ ಸಂಚು ರೂಪಿಸಿರುವುದು ಪರಿಚಯ ಇರುವವರೇ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ. ರೇಖಾ ಕದಿರೇಶ್ ಜೊತೆಗಿದ್ದ ಪೀಟರ್ ಆ್ಯಂಡ್ ಟೀಂ ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತು ಕಾಟಾನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.