ಬೆಂಗಳೂರು : ಕಾಂಗ್ರೆಸ್ ಪ್ರಚಾರ ನಡೆಸುತ್ತಿದ್ದ ವೇಳೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ನಡೆಸಿದ ಹಲ್ಲೆಯ ಸೂಕ್ತ ತನಿಖೆ ನಡೆಸುವ ಭರವಸೆ ಪೊಲೀಸ್ ಅಧಿಕಾರಿಗಳಿಂದ ಲಭಿಸಿದೆ ಎಂದು ಸಂಸದ ಡಿಕೆ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಿದೇವಿನಗರ ವಾರ್ಡ್ನಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ವೇಲು ನಾಯ್ಕರ್, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲರಿಗೂ ಮತ ಕೇಳುವ ಅಧಿಕಾರವಿದೆ. ಪೊಲೀಸರ ಕುಮ್ಮಕ್ಕಿನಿಂದಲೇ ಈ ಗೂಂಡಾ ವರ್ತನೆ ನಡೆದಿದೆ. ಗಲಾಟೆ ಮಾಡಿದವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿತ್ತು.
ಆದರೆ, ನಮ್ಮವರನ್ನೇ ಅಲ್ಲಿಂದ ಕಳಿಸಿದ್ದಾರೆ. ಓರ್ವ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಕ್ರಮ ತೆಗೆದುಕೊಳ್ಳುವ ಭರವಸೆ ಎಸಿಪಿ ಕೊಟ್ಟಿದ್ದಾರೆ. ಅವರು ಸಂಜೆಯೊಳಗೆ ಕ್ರಮತೆಗೆದುಕೊಳ್ಳಬೇಕು. ಇಲ್ಲವಾದರೆ ನಾಳೆಯಿಂದ ಠಾಣೆ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿರುವೆ.
ನಾವು ಕಾರ್ಯಕರ್ತರ ರಕ್ಷಣೆಗೆ ಇದ್ದೇವೆ. ಶಾಂತಿಯುತ ಮತದಾನ ನಡೆಯಬೇಕು. ನೀವು ಸಾಧನೆ ಮಾಡಿದ್ದರೆ ಧೈರ್ಯವಾಗಿ ಹೋಗಿ. ಈ ರೀತಿಯ ಗೂಂಡಾ ವರ್ತನೆಯಿಂದ ನಡೆದುಕೊಂಡರೆ ಸುಮ್ಮನಿರುವುದಿಲ್ಲ. 40 ಸಾವಿರ ವೋಟರ್ ಐಡಿ ಪ್ರಿಂಟ್ ಮಾಡಿಸಿಕೊಂಡಿದ್ದಾರೆ. ಪ್ರಧಾನಿಯವರೇ ಇದನ್ನ ಹೇಳಿದ್ದಾರೆ. ನಾನು 25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ವೋಟರ್ ಐಡಿ ಕಲೆಕ್ಟ್ ಮಾಡೋ ಚಾಳಿ ನನಗಿಲ್ಲ. ವ್ಯಕ್ತಿತ್ವದ ಆಧಾರದ ಮೇಲೆ ನಾವು ಚುನಾವಣೆಯನ್ನು ಮಾಡುತ್ತೇವೆ. ಸಾಕಷ್ಟು ಜನ ಕ್ಷೇತ್ರದವರು ಅಲ್ಲದವರು ಇದ್ದಾರೆ ಎಂದು ಆರೋಪಿಸಿದರು.
ಹೊಸ ವೋಟರ್ ಐಡಿ ಪಟ್ಟಿಯಲ್ಲಿ ನಮ್ಮ ಮತದಾರರ ಹೆಸರು ಕೈಬಿಡಲಾಗಿದೆ. ಅವರಿಗೆ ಸಮಸ್ಯೆಯಿದ್ದರೆ ಕಾನೂನು ಪ್ರಕಾರ ಹೋರಾಡಲಿ. ವೇಲು ನಾಯ್ಕರ್ ಅರೆಸ್ಟ್ ಮಾಡಬೇಕು. ನಮ್ಮ ಕಾರ್ಯಕರ್ತರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು. ಮೂರ್ನಾಲ್ಕು ಕಡೆ ಇದೇ ರೀತಿ ಆಗಿದೆ. ಮುಕ್ತ ಚುನಾವಣೆ ನಡೆಯಬೇಕು. ಅರೆ ಸೇನಾಪಡೆಯನ್ನು ನಿಯೋಜಿಸಬೇಕು. ಇಲ್ಲಿನ ಜನ ಬಹಳ ಭಯದಲ್ಲೇ ಇದ್ದಾರೆ ಎಂದರು.
ಮನೆಗೆ ಹೋಗಲು ಭಯ:
ಹಲ್ಲೆಗೊಳಗಾದ ಮಹಿಳೆ ಪಂಡರಿಬಾಯಿ ಮಾತನಾಡಿ, ನಾವು ನಿನ್ನೆಯಿಂದ ಪ್ರಚಾರ ಮಾಡುತ್ತಿದ್ದೇವೆ. ಪ್ರಚಾರದ ವೇಳೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಹೆಸರು ಹೇಳೋಕೆ ನಮಗೆ ಭಯವಾಗುತ್ತಿದೆ. ನಮ್ಮ ಮನೆಗೆ ಹೋಗಬೇಕೆಂದರೂ ನಮಗೆ ಭಯ ಎನಿಸುತ್ತಿದೆ. ಸಿಸಿ ಕ್ಯಾಮೆರಾಗಳಲ್ಲಿ ಹಲ್ಲೆ ಮಾಡಿರುವುದು ಇದೆ. ಅದನ್ನ ನೋಡಿ ಕ್ರಮ ತೆಗೆದುಕೊಳ್ಳಲಿ ಎಂದರು.