ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ನೀಡಿರುವ ಬಂದ್ಗೆ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ನಾಯಕರನ್ನು ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಸಪ್ತಗಿರಿ ಗೌಡ ಸೇರಿ ಕೆಲ ಬಿಜೆಪಿ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದರು. 144 ಸೆಕ್ಷನ್ ಇರುವ ಕಾರಣ ಪ್ರತಿಭಟನೆ ನಡೆಸದಂತೆ ಪೊಲೀಸರು ಸೂಚನೆ ನೀಡಿದರು. ಯಾವುದೇ ರ‍್ಯಾಲಿ ಹೋಗುವುದಿಲ್ಲ, ಪ್ರತಿಭಟನೆಗೆ ಅವಕಾಶ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದರು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಪೊಲೀಸರು ಚದುರಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎನ್. ರವಿಕುಮಾರ್, ಬೆಂಗಳೂರಿನ ಜನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಇದ್ದೇವೆ ಎಂಬುದನ್ನು ಬಂದ್ ಮಾಡುವ ಮೂಲಕ ತೋರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಇದು ಅವಮಾನದ ಸಂಗತಿ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿ ಅವರು ಜೈಲಿಗೆ ಹೋಗಬೇಕಾಗಿತ್ತು. ಹಾಗಾಗಿದ್ದರೆ ರೈತರಿಗಾಗಿ ಹೋಗುತ್ತಿದ್ದರು ತಾನೇ? ಎಂದು ಪ್ರಶ್ನಿಸಿದರು. ಪ್ರತಿಭಟನೆ ಆರಂಭಕ್ಕೂ ಮುನ್ನವೇ ಸಪ್ತಗಿರಿ ಗೌಡ ಮತ್ತು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಬಳಿಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರನ್ನು ವಶಕ್ಕೆ ಪಡೆದು ಹೊಯ್ಸಳದಲ್ಲಿ ಕರೆದೊಯ್ದರು.
ಜೆಡಿಎಸ್ ಕಾರ್ಯಕರ್ತರು ವಶಕ್ಕೆ:ಪಕ್ಷದ ಕೇಂದ್ರ ಕಚೇರಿ ಜೆ ಪಿ ಭವನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಜೆಡಿಎಸ್ ಕಚೇರಿ ಸಮೀಪವೇ ತಡೆದು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಕರೆದೊಯ್ದರು. ಇದಕ್ಕೂ ಮುನ್ನ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ದಮನಕಾರಿ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಕಾವೇರಿ ನದಿ ನೀರಿನ ಹೋರಾಟ ನಮ್ಮ ಹಕ್ಕಾಗಿದೆ. ಪ್ರತಿಭಟನೆ ನಮಗೆ ಸಂವಿಧಾನ ಬದ್ಧ ಹಕ್ಕು ಕೊಟ್ಟಿದೆ. ನ್ಯಾಯಬದ್ಧವಾಗಿ, ಶಾಂತಿಯುತವಾಗಿ ಪ್ರತಿಭಟನೆಗೆ ಸಜ್ಜಾಗಿದ್ದ ನಮ್ಮನ್ನು, ನಮ್ಮ ಜೊತೆ ಬಂದಿದ್ದ ನೂರಾರು ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಗೆ ಅವಕಾಶವನ್ನು ನೀಡದೆ ಪೊಲೀಸ್ ದರ್ಪವನ್ನು ಬಳಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.