ಬೆಂಗಳೂರು:ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮಾರ್ಚ್ 29 ರಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ರೀತಿಯಲ್ಲಿ ತಂತ್ರಗಳನ್ನು ರೂಪಿಸುತ್ತಿವೆ. ಇದರ ಮಧ್ಯೆ ನರೇಂದ್ರ ಪ್ರಧಾನಿ ಮೋದಿ ಅವರು ಕನ್ನಡದಲ್ಲಿ ಟ್ಟೀಟ್ ಮಾಡಿ ಗಮನ ಸೆಳೆದಿದ್ದಾರೆ.
ಕರ್ನಾಟಕ ಅಭಿವೃದ್ಧಿಯ ಶಕ್ತಿಕೇಂದ್ರ. ಕಷ್ಟಪಟ್ಟು ದುಡಿಯುವ ರಾಜ್ಯದ ಜನರಿಗೆ ಧನ್ಯವಾದಗಳು. ಕರ್ನಾಟಕದ ಬೆಳವಣಿಗೆಯ ಪಯಣವನ್ನು ವೇಗಗೊಳಿಸಲು ಹಾಗು ಬಡವರು, ಸಮಾಜದಲ್ಲಿ ಮೂಲೆಗುಂಪಾದವರು, ದಮನಿತರನ್ನು ಸಶಕ್ತಗೊಳಿಸಲು ಬಿಜೆಪಿ ಬದ್ಧವಾಗಿದೆ. ನಾವು ನಮ್ಮ ಅಭಿವೃದ್ಧಿಯ ಕಾರ್ಯಸೂಚಿ ಆಧರಿಸಿ ಜನಾಶೀರ್ವಾದ ಬಯಸುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಬಿಜೆಪಿ ಕರ್ನಾಟಕ ಟ್ವಿಟರ್ ಹ್ಯಾಂಡಲ್ ಟ್ವೀಟ್ವೊಂದನ್ನು ಮಾಡಿತ್ತು. ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆ ಎಂದು ಹೇಳಿದೆ. ಈ ಟ್ವೀಟ್ ಅನ್ನು ಮೋದಿ ರೀಟ್ವೀಟ್ ಮಾಡಿ ಕರ್ನಾಟಕದ ಜನತೆಯ ಬಗ್ಗೆ ಮಾತನಾಡಿದ್ದಾರೆ.
ಮಾರ್ಚ್ 28 ರಂದು ಪ್ರಧಾನಿ ಮೋದಿ ಅವರು ಕನ್ನಡದಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದರು. ಇದರಲ್ಲಿ, ಕಲಬುರಗಿಯಲ್ಲಿ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಸ್ಥಾಪನೆಗಾಗಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ಈ ಪಾರ್ಕ್ ರಾಜ್ಯದ ಶ್ರೀಮಂತ ಜವಳಿ ಪರಂಪರೆಯನ್ನು ಸಂಭ್ರಮಿಸುತ್ತದೆ. ರಾಜ್ಯದ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಎಂದಿದ್ದರು.
ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕವನ್ನು ನಿನ್ನೆ ಪ್ರಕಟಿಸಿದೆ. ಮೇ 10, 2023 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಂದರೆ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ಸಂಹಿತೆಗೆ ಬದ್ಧರಾಗಿರುತ್ತಾರೆ.