ಬೆಂಗಳೂರು: ರಾಜ್ಯದಲ್ಲಿ ಟ್ರಾಫಿಕ್ ಪೊಲೀಸರು ಸಂಗ್ರಹಿಸಿರುವ ದಂಡದ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ನಗರದ ವಕೀಲ ಉಮೇಶ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಲೆಕ್ಕ ಪರಿಶೋಧಕರ ಕಚೇರಿಯನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿದಾದರರ ಕೋರಿಕೆ ಏನು?
ಹೆಲ್ಮೆಟ್ ಧರಿಸದಿರುವುದು, ಪರವಾನಗಿ, ವಾಹನದ ದಾಖಲೆ ಹೊಂದಿಲ್ಲದಿರುವುದು, ನೋ ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸುವುದು, ಸಿಗ್ನಲ್ ಜಂಪ್ ಸೇರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸವಾರರಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಹೀಗೆ ವಸೂಲಿ ಮಾಡಿದ ದಂಡ ಮೊತ್ತದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಿಲ್ಲ. ಕರ್ನಾಟಕ ಆರ್ಥಿಕ ಸಂಹಿತೆ-1958ರ ಸೆಕ್ಷನ್ 35ರ ಪ್ರಕಾರ ಸಂಗ್ರಹವಾಗುವ ಯಾವುದೇ ದಂಡವನ್ನು ಸರ್ಕಾರದ ಖಜಾನೆಗೆ ಪಾವತಿಸಬೇಕು.
ಆದರೆ ರಾಜ್ಯ ಸರ್ಕಾರಿ ಇಲಾಖೆಗಳ ಲೆಕ್ಕ ಪರಿಶೋಧನೆ ಮಾಡುವ ಭಾರತೀಯ ಮಹಾಲೇಖಪಾಲರ ವರದಿಯಲ್ಲಿ ಟ್ರಾಫಿಕ್ ಪೊಲೀಸರ ದಂಡ ಮೊತ್ತದ ಬಗ್ಗೆ ಉಲ್ಲೇಖವಿಲ್ಲ. ಮಾಹಿತಿಯಂತೆ ಟ್ರಾಫಿಕ್ ಪೊಲೀಸರು ರಾಜ್ಯದಲ್ಲಿ ವಾರ್ಷಿಕ 500 ಕೋಟಿ ರೂಪಾಯಿಗೂ ಹೆಚ್ಚು ದಂಡ ಸಂಗ್ರಹಿಸುತ್ತಾರಂತೆ. ಸದ್ಯ ದಂಡದ ಮೊತ್ತಗಳನ್ನು ಹೆಚ್ಚಿಸಿದ್ದು, ಒಟ್ಟು ಮೊತ್ತ ಇನ್ನೂ ಅಧಿಕವಾಗಲಿದೆ. ಆದರೆ ಬಜೆಟ್ ಮಂಡನೆ ವೇಳೆ ಸರ್ಕಾರ ಇದರ ವಿವರ ಕೊಡುತ್ತಿಲ್ಲ. ಹೀಗಾಗಿ ವಾರ್ಷಿಕ ಬಜೆಟ್ ಅಂತಿಮಗೊಳಿಸುವ ಮುನ್ನ ಆಯಾ ವರ್ಷದಲ್ಲಿ ಎಷ್ಟು ದಂಡದ ಹಣ ಸಂಗ್ರಹಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿ ಶ್ವೇತಪತ್ರ ಪ್ರಕಟಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಅಲ್ಲದೆ ಕಳೆದ ಹತ್ತು ವರ್ಷಗಳಲ್ಲಿ ಸಂಗ್ರಹಿಸಿರುವ ಮತ್ತು ಮುಂದಿನ ದಿನಗಳಲ್ಲಿ ಸಂಗ್ರಹಿಸುವ ದಂಡದ ಮೊತ್ತದ ವಿವರಗಳನ್ನು ಕಡ್ಡಾಯವಾಗಿ ಸರ್ಕಾರಿ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.