ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ನಗರದ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್ ಎಂಬುವವರು ಈ ಪಿಐಎಲ್ ಸಲ್ಲಿಸಿದ್ದು, ಸುಗ್ರೀವಾಜ್ಞೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಮತ್ತು ರದ್ದುಪಡಿಬೇಕು ಎಂದು ಕೋರಿದ್ದಾರೆ. ಹಾಗೆಯೇ ಅರ್ಜಿ ಇತ್ಯರ್ಥವಾಗುವವರೆಗೆ ಸುಗ್ರೀವಾಜ್ಞೆ ಜಾರಿ ಮಾಡದಂತೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ವಾದಿಸಿ, ಅರ್ಜಿಯಲ್ಲಿರುವ ವಿಚಾರಗಳು ಅತ್ಯಂತ ಗಂಭೀರವಾಗಿದ್ದು, ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಇದಕ್ಕೆ ಆಕ್ಷೇಪಿಸಿದ ಪೀಠ, ಅರ್ಜಿ ಸಲ್ಲಿಸಲು ಮತ್ತು ವಿಚಾರಣೆಗೆ ಪರಿಗಣಿಸಲು ಅದರದೇ ಆದ ಪ್ರಕ್ರಿಯೆ ಇದೆ. ಪಿಐಎಲ್ ಅರ್ಜಿಗಳು ಸಲ್ಲಿಕೆಯಾದ ಏಳು ದಿನಗಳ ಒಳಗೆ ವಿಚಾರಣೆಗೆ ನಿಗದಿಯಾಗಲಿದೆ. ಈಗಲೇ ವಿಚಾರಣೆ ಪರಿಗಣಿಸುವ ತುರ್ತು ಅಗತ್ಯವೇನಿದೆ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ವಕೀಲರು, ರಾಜ್ಯಪಾಲರ ಒಪ್ಪಿಗೆ ಮೇರೆಗೆ ಸರ್ಕಾರ ಮಂಗಳವಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದರಿಂದಾಗಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ವಿಧೇಯಕದ ನಿಯಮಗಳು ಜಾರಿಗೆ ಬಂದಿದ್ದು, ಸಮಾಜದಲ್ಲಿ ಗೊಂದಲ ಹಾಗೂ ಸಂಘರ್ಷ ನಿರ್ಮಾಣವಾಗುವ ಸಾಧ್ಯತೆಯಿದೆ. ಹೀಗಾಗಿ ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ವಾದ ಒಪ್ಪದ ಪೀಠ, ಅರ್ಜಿ ಪ್ರಕ್ರಿಯೆಯಂತೆ ವಿಚಾರಣೆಗೆ ಬರಲಿ ಎಂದು ಸೂಚಿಸಿತು.