ಕರ್ನಾಟಕ

karnataka

ETV Bharat / state

ಪತ್ರಕರ್ತರಿಗೆ 1 ಕೋಟಿ ರೂ. ವಿಮೆ ಕೋರಿ ಪಿಐಎಲ್ : ರಾಜ್ಯ - ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಕೊರೊನಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಪತ್ರಕರ್ತರಿಗೆ ಸರ್ಕಾರ 50 ಲಕ್ಷ ರೂ. ಮತ್ತು ಮಾಧ್ಯಮ ಸಂಸ್ಥೆಗಳಿಂದ 50 ಲಕ್ಷದ ವಿಮೆ ಪರಿಹಾರ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಮಂಗಲದ ಜಾಕೊಬ್ ಜಾರ್ಜ್ ಸಲ್ಲಿಸಿದ್ದ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಹೈಕೋರ್ಟ್​
ಹೈಕೋರ್ಟ್​

By

Published : May 15, 2020, 11:38 PM IST

ಬೆಂಗಳೂರು: ಪತ್ರಕರ್ತರು ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಪರಿಹಾರ ಸಿಗುವಂತೆ ಒಂದು ಕೋಟಿ ಮೊತ್ತದ ವಿಮೆ ನೀಡಲು ಸರ್ಕಾರ ಮತ್ತು ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು, ಹೈಕೋರ್ಟ್ ಇತ್ಯರ್ಥಪಡಿಸಿದೆ. ಈ ವೇಳೆ, ಅರ್ಜಿದಾರರ ಮನವಿಯನ್ನು ಮುಂದಿನ ಎರಡು ತಿಂಗಳಲ್ಲಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶಿಸಿದೆ.

ಕೊರೊನಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಪತ್ರಕರ್ತರಿಗೆ ಸರ್ಕಾರ 50 ಲಕ್ಷ ರೂ. ಮತ್ತು ಮಾಧ್ಯಮ ಸಂಸ್ಥೆಗಳಿಂದ 50 ಲಕ್ಷದ ವಿಮೆ ಪರಿಹಾರ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಮಂಗಲದ ಜಾಕೊಬ್ ಜಾರ್ಜ್ ಸಲ್ಲಿಸಿದ್ದ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರ ವಕೀಲರು ಮಾಧ್ಯಮ ಪ್ರತಿನಿಧಿಗಳು ಖಾಸಗಿ ವಲಯಕ್ಕೆ ಸೇರುವುದರಿಂದ ಸರ್ಕಾರದಿಂದ ವಿಮೆ ಕೊಡಿಸುವುದು ಸೂಕ್ತವಲ್ಲ ಎಂದು ವಾದಿಸಿದರು.

ಸರ್ಕಾರಿ ವಕೀಲರ ಹೇಳಿಕೆಗೆ ಅರ್ಜಿದಾರರ ಪರ ವಕೀಲ ಎಚ್. ಸುನೀಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಂವಿಧಾನದ 21ನೇ ವಿಧಿಯ ಅನುಸಾರ ಎಲ್ಲ ನಾಗರಿಕರ ಜೀವರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ. ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕಂಟೇನ್​ಮೆಂಟ್ ವಲಯಗಳಿಗೆ ಭೇಟಿ ನೀಡಿ, ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳನ್ನು ಕೊರೊನಾ ವಾರಿಯರ್ಸ್ ಎಂದೇ ಪರಿಗಣಿಸಿ ವೈದ್ಯರು, ಪೊಲೀಸರಿಗೆ ಘೋಷಿಸಿರುವಂತೆಯೇ ಪರಿಹಾರ ನೀಡಬೇಕು. ಪತ್ರಕರ್ತರನ್ನು ಕೋವಿಡ್-19 ಪರಿಹಾರ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ವಕೀಲರ ಹೇಳಿಕೆ ಪರಿಗಣಿಸಿದ ಪೀಠ, ಕೊರೊನಾ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರ ಪಾತ್ರವೂ ಬಹಳ ಮುಖ್ಯವಾಗಿದೆ. ಹೀಗಾಗಿ, ಕೋವಿಡ್-19 ಪರಿಹಾರ ಯೋಜನೆಗೆ ಪತ್ರಕರ್ತರನ್ನು ಸೇರಿಸಲು ಅಥವಾ ಇವರಿಗಾಗಿ ಬೇರಾವುದೇ ವಿಮಾ ಯೋಜನೆ ರೂಪಿಸಲು ಸಾಧ್ಯವೇ? ಎಂಬುದರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಿನ ಎರಡು ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು. ಪತ್ರಕರ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರಗಳು ಮಾಧ್ಯಮ ಸಂಸ್ಥೆಗಳ ಮಾಲೀಕರ ಜೊತೆ ಸಭೆ ನಡೆಸಿ ತೀರ್ಮಾನಿಸಬೇಕು. ಪತ್ರಕರ್ತರ ಸುರಕ್ಷತೆಗೆ ಯಾವ ವಿಮಾ ಯೋಜನೆ ರೂಪಿಸಬೇಕು? ಅದರ ರೂಪುರೇಷ ಹೇಗಿರಬೇಕು? ಎಂಬ ಬಗ್ಗೆ ಪರಾಮರ್ಶೆ ನಡೆಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ABOUT THE AUTHOR

...view details