ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಗೆ ಹಿಂದೂಯೇತರರನ್ನು ಅಧಿಕಾರಿ ಹಾಗೂ ಸಿಬ್ಬಂದಿಯಾಗಿ ನಿಯೋಜಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ವಕೀಲ ಎನ್.ಪಿ. ಅಮೃತೇಶ್ ಮತ್ತು ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ವಕೀಲ ಎನ್. ಪಿ. ಅಮೃತೇಶ್ ವಾದಿಸಿ, ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆ ಸೆಕ್ಷನ್ 7ರ ಪ್ರಕಾರ ಮುಜರಾಯಿ ಇಲಾಖೆಯ ಕಚೇರಿಯಲ್ಲಿನ ಕಾರ್ಯಭಾರಗಳ ನಿರ್ವಹಣೆಗೆ ಹಿಂದೂಯೇತರರನ್ನು ಅಧಿಕಾರಿ ಹಾಗೂ ಸಿಬ್ಬಂದಿಯಾಗಿ ನೇಮಕ ಮಾಡುವಂತಿಲ್ಲ. ಆದರೆ, ಸರ್ಕಾರ ಇಲಾಖೆಯಲ್ಲಿ ಹಿಂದೂಯೇತರರನ್ನು ನಿಯೋಜಿಸಿದ್ದು, ಅವರನ್ನು ಬೇರೊಂದು ಇಲಾಖೆಗೆ ವರ್ಗಾಯಿಸಲು ನಿರ್ದೇಶಿಸಬೇಕು ಎಂದು ಕೋರಿದರು.
ಓದಿ :ಪದ್ಮವಿಭೂಷಣ ಪುರಸ್ಕೃತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ವಿಧಿವಶ
ವಾದವನ್ನು ಒಪ್ಪಲು ನಿರಾಕರಿಸಿದ ಪೀಠ, ಸೆಕ್ಷನ್ 7ರ ಪ್ರಕಾರ ಧಾರ್ಮಿಕ ಕಾರ್ಯಭಾರಗಳ ನಿರ್ವಹಣೆಗೆ ಹಿಂದೂಯೇತರರ ನೇಮಕ ಮಾಡುವಂತಿಲ್ಲ. ಆದರೆ, ಮುಜರಾಯಿ ಇಲಾಖೆ ಕಚೇರಿಗಳ ಕಾರ್ಯಭಾರಗಳಿಗೆ ಹಿಂದೂಯೇತರರನ್ನು ನೇಮಕ ಮಾಡಲು ಯಾವುದೇ ನಿರ್ಬಂಧವಿಲ್ಲ. ಸಿಬ್ಬಂದಿಯನ್ನು ಕಾರ್ಯಭಾರದ ಆಧಾರದಲ್ಲಿ ನಿರ್ಧರಿಸಬೇಕು ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿತು.