ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಯ್ದೆಯನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಇದೇ ಫೆ.17 ಕ್ಕೆ ಅರ್ಜಿ ವಿಚಾರಣೆ ನಿಗದಿಯಾಗಿದೆ.
ಬಿಬಿಎಂಪಿ ಕಾಯ್ದೆ-2020 ರ ಕೆಲವೊಂದು ಸೆಕ್ಷನ್‌ಗಳು ಭಾರತದ ಸಂವಿಧಾನ ಹಾಗೂ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಕೆಎಂಸಿ) ಕಾಯ್ದೆಗೆ ತದ್ವಿರುದ್ಧವಾಗಿವೆ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಎಲ್.ಎಸ್. ಮಲ್ಲಿಕಾರ್ಜುನ್ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲ ಜಿ. ಆರ್ ಮೋಹನ್ ವಾದ ಆಲಿಸಿದ ಪೀಠ, ಅರ್ಜಿಯಲ್ಲಿ ಬಿಬಿಎಂಪಿ ಕಾಯ್ದೆಯ ನಿರ್ದಿಷ್ಟ ಸೆಕ್ಷನ್‌ಗಳ ಬಗ್ಗೆ ಆಕ್ಷೇಪ ಎತ್ತಲಾಗಿದೆ. ಆದರೆ ಮನವಿಯಲ್ಲಿ ಇಡೀ ಕಾಯ್ದೆಯನ್ನೇ ರದ್ದುಪಡಿಸುವಂತೆ ಕೋರಲಾಗಿದೆ. ಕೆಲ ಸೆಕ್ಷನ್‌ಗಳಿಗಾಗಿ ಕಾಯ್ದೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿಯಲ್ಲಿನ ಮನವಿಯನ್ನು ಮಾರ್ಪಾಡುಗೊಳಿಸಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಫೆ.17ಕ್ಕೆ ನಿಗದಿಪಡಿಸಿತು.