ಬೆಂಗಳೂರು: ಮರಾಠಿ ಪೇಶ್ವೆಗಳ ಡಿಎನ್ಎ ಬಗ್ಗೆ ನಾನು ಕೊಟ್ಟ ಹೇಳಿಕೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ, ಕ್ಷಮೆಯನ್ನೂ ಕೇಳುವುದಿಲ್ಲ. ತಾಕತ್ತಿದ್ದರೆ ನಾನು ಹೇಳಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಬಿಜೆಪಿಯವರು ಚುನಾವಣೆಗೆ ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದರು.
ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಹ್ಲಾದ್ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಹೇಳಿಲ್ಲ. ಅವರು ಯಾರನ್ನೂ ಬೇಕಾದರೂ ಸಿಎಂ ಮಾಡಿಕೊಳ್ಳಲಿ. ಬೇಕಾದರೆ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದರು.
ಬ್ರಾಹ್ಮಣ, ದಲಿತ ಯಾವುದೇ ಸಮಾಜಕ್ಕೂ ಅಪಮಾನ ಮಾಡುವ ಕುಟುಂಬದಿಂದ ನಾನು ಬಂದಿಲ್ಲ. ಈ ದೇಶದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ, ಪ್ರಧಾನಿ ಆಗಬಹುದು. ಆದರೆ ನಿರ್ದಿಷ್ಟವಾದ ಈ ವ್ಯಕ್ತಿಯನ್ನು ಬಿಜೆಪಿಯವರು ಸಿಎಂ ಮಾಡಲು ಹೊರಟಿದ್ದಾರೆ. ನನಗೆ ಅವರ ಬಗ್ಗೆ ತಕರಾರು ಇಲ್ಲ. ತಕರಾರು ಇರುವುದು ಅವರ ಮೂಲದ ಬಗ್ಗೆ ಎಂದು ಹೇಳಿದರು.