ಬೆಂಗಳೂರು: ಏಳನೇ ತರಗತಿಯ ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠ ಕಿತ್ತು ಹಾಕಿದ್ದಕ್ಕೆ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಟಿಪ್ಪು ಜಯಂತಿ ಆಚರಣೆ ಮಾಡುವುದು, ಬಿಡುವುದು ಅವರಿಗೆ ಸೇರಿದ್ದು. ಆದರೆ ಆತನ ವಿಚಾರಗಳನ್ನು ಪಠ್ಯದಿಂದ ಕೈಬಿಡುವುದು ಸರಿಯಲ್ಲ. ಪಠ್ಯಕ್ರಮದಿಂದ ಕೈಬಿಡದಂತೆ ಈ ಹಿಂದೆಯೂ ಒತ್ತಡ ಹೇರಿದ್ದೆವು. ಅವರು ತನ್ನ ಅಜೆಂಡಾ ಈಡೇರಿಸಲು ಹೀಗೆ ಮಾಡಿದ್ದಾರೆ. ಆದರೆ, ಟಿಪ್ಪು ಇತಿಹಾಸ ತಿರುಚಲು ಸಾಧ್ಯವಿಲ್ಲ. ಟಿಪ್ಪು, ಹೈದರಾಲಿ ಹೋರಾಟ ಮಾಡಿದ ಬಗ್ಗೆ ಬ್ರಿಟಿಷರ ಬಳಿಯೇ ದಾಖಲೆಗಳಿವೆ. ಇದು ಬಿಜೆಪಿಯವರಿಗೂ ಗೊತ್ತಿದೆ. ಕೆಪಿಸಿಸಿಯಿಂದಲೇ ಆಧ್ಯಯನ ಸಮಿತಿ ರಚನೆ ಮಾಡ್ತೇವೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೇವೆ. ನಾವು ಎಲ್ಲವನ್ನೂ ಸಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪಕ್ಕೆ ಉತ್ತರಿಸದೆ ಡಿಕೆಶಿ ಮೌನವಾಗಿ ತೆರಳಿದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಸಿ, ಕರ್ನಾಟಕ ಅಷ್ಟೇ ಅಲ್ಲ, ಬಿಜೆಪಿ ಎಲ್ಲೆಲ್ಲಿದೆಯೋ ಅಲ್ಲೆಲ್ಲಾ ಇದೇ ಕಥೆ. ಪಠ್ಯ ಪುಸ್ತಕ ಕೇಸರೀಕರಣ ಮಾಡುವ ಕೆಲಸ ನಡೆದಿದೆ, ಇದರಲ್ಲಿ ವಿಶೇಷವೇನೂ ಇಲ್ಲ. ಸಂವಿಧಾನ, ಜಾತ್ಯತೀತತೆಯ ಪಾಠ ತೆಗೆದು ಹಾಕಿದ್ದಾರೆ. ಇವರು ಸಂವಿಧಾನ ರಚನೆಯಲ್ಲಿ ಪಾಲುದಾರರಾಗಿರಲಿಲ್ಲ. ಹೀಗಾಗಿ ಇತಿಹಾಸವನ್ನು ಕೇಸರೀಕರಣ ಮಾಡುತ್ತಿದ್ದಾರೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕಷ್ಟವನ್ನು ನಾಶಪಡಿಸುತ್ತಿದ್ದಾರೆ. ಯುವಜನತೆಯ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದು ಖಂಡನೀಯ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಟಿಪ್ಪು ಪಠ್ಯ ಕೈಬಿಟ್ಟಿದ್ದು ದುರ್ದೈವ. ಸರ್ಕಾರ ಇಂತಹ ಸಂದರ್ಭದಲ್ಲೂ ಈ ಕೆಲಸ ಮಾಡಿದ್ದು ಸರಿಯಲ್ಲ. ಕೂಡಲೇ ನಿರ್ಧಾರವನ್ನು ವಾಪಸ್ ಪಡೆಯಬೇಕು. ಟಿಪ್ಪು ಸುಲ್ತಾನ್ ಒಬ್ಬ ದೇಶ ಭಕ್ತ. ಕೇಸರೀಕರಣ ಮಾಡಲು ಸರ್ಕಾರ ಈ ಹುನ್ನಾರ ನಡೆಸಿದೆ. ಕೆಲ ಪಠ್ಯದಲ್ಲಿ ಉಳಿಸಿ ಒಂದು ತರಗತಿಯಲ್ಲಿ ಬಿಟ್ಟಿದ್ದು ಸರಿಯಲ್ಲ. ಕೊರೊನಾ ಕಡೆ ಸರ್ಕಾರ ಹೆಚ್ಚಿನ ಗಮನಕೊಡಲಿ. ಅದನ್ನು ಬಿಟ್ಟು ಇಂಥ ಕೆಲಸ ಮಾಡೋದು ಸರಿಯಲ್ಲ ಎಂದು ಹೇಳಿದರು.