ಬೆಂಗಳೂರು:ಬೆಂಗಳೂರು ನಗರ ಜಿಲ್ಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳ ವಿಲೇವಾರಿಗಾಗಿ ವಿಶೇಷ ಜಿಲ್ಲಾಧಿಕಾರಿ-3 ಹುದ್ದೆಯನ್ನು ಸೃಜಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಈಗಾಗಲೇ ಬೆಂಗಳೂರಲ್ಲಿ ವಿಶೇಷ ಜಿಲ್ಲಾಧಿಕಾರಿ-1, ವಿಶೇಷ ಜಿಲ್ಲಾಧಿಕಾರಿ-2 ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ವಿಶೇಷ ಜಿಲ್ಲಾಧಿಕಾರಿ-3ನ್ನು ಸೃಜಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವ ನ್ಯಾಯಿಕ, ಅರೆ ನ್ಯಾಯಿಕ ಪ್ರಕರಣಗಳ ಪರಿಶೀಲನೆ ಮಾಡಿದಾಗ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳ ವಿಲೇವಾರಿಗಾಗಿ ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಿದ್ದರು.
ಬೆಂಗಳೂರು ನಗರ ಜಿಲ್ಲೆಯ ಬೆಲೆ ಬಾಳುವ ಜಮೀನುಗಳ ಭೂ ಕಬಳಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವುದು, ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದ ಅರೆ ನ್ಯಾಯಿಕ ಪ್ರಕರಣಗಳು ತೀರ್ಮಾನಕ್ಕೆ ಬಾಕಿ ಇರುವುದನ್ನು ಪರಿಗಣಿಸಿ ಈ ಪ್ರಕರಣಗಳನ್ನು ಅತಿ ಶೀಘ್ರವಾಗಿ ಇತ್ಯರ್ಥಪಡಿಸಲು ತೀರ್ಮಾನಿಸಲಾಗಿತ್ತು.