ಕರ್ನಾಟಕ

karnataka

ETV Bharat / state

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆಗೆ ವಿರೋಧ: ಸಿಎಂ ನೇತೃತ್ವದಲ್ಲಿ ದಿಲ್ಲಿಗೆ ನಿಯೋಗ - Delegation to Delhi headed by CM

ಪಶ್ಚಿಮ ಘಟ್ಟ ಕರಡು ಅಧಿಸೂಚನೆ ವಿರೋಧಿಸಿ ಸಿಎಂ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಈ ಸಭೆಯಲ್ಲಿ ಪಶ್ಚಿಮ ಘಟ್ಟದ ಶಾಸಕರ ನೇತೃತ್ವದ ನಿಯೋಗ ದೆಹಲಿಗೆ ತೆರಳಲು ನಿರ್ಧಾರ ಮಾಡಿದೆ.

ಮಲೆನಾಡು ಹಾಗೂ ಕರಾವಳಿ ಭಾಗದ ಶಾಸಕರ ಸಭೆ
ಮಲೆನಾಡು ಹಾಗೂ ಕರಾವಳಿ ಭಾಗದ ಶಾಸಕರ ಸಭೆ

By

Published : Jul 18, 2022, 7:17 PM IST

ಬೆಂಗಳೂರು: ಪಶ್ಚಿಮಘಟ್ಟ ಸಂಬಂಧ ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ಅಧಿಸೂಚನೆ ವಿರುದ್ಧ ಕಾನೂನು ಹೋರಾಟ ಮಾಡಲು ವಕೀಲರನ್ನು ನೇಮಿಸುವುದರ ಜೊತೆಗೆ ದೆಹಲಿಗೆ ಸಿಎಂ ನೇತೃತ್ವದಲ್ಲಿ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿದೆ. ಪಶ್ಚಿಮ ಘಟ್ಟ ಸಂಬಂಧ ಕರಡು ಅಧಿಸೂಚನೆ ವಿರುದ್ಧ ವಿಕಾಸಸೌಧದಲ್ಲಿ ಸಿಎಂ ನೇತೃತ್ವದಲ್ಲಿ, ಮಲೆನಾಡು ಹಾಗೂ ಕರಾವಳಿ ಭಾಗದ ಶಾಸಕರ ಸಭೆ ನಡೆಯಿತು.

ಸಭೆ ಬಳಿಕ ಮಾತನಾಡಿದ ಗೃಹಸಚಿವ ಆರಗ ಜ್ಞಾನೆಂದ್ರ, ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಐದನೇಯ ಕರಡು ಅಧಿಸೂಚನೆಯನ್ನು ಇತ್ತೀಚೆಗೆ ಕೇಂದ್ರದ ಪರಿಸರ ಸಚಿವಾಲಯ ಪ್ರಕಟಿಸಿದೆ. ಇದರ ಬಗ್ಗೆ ಇವತ್ತು ಚರ್ಚೆ ಮಾಡಲಾಯ್ತು.‌ 2008 ರಲ್ಲಿ ಗಾಡ್ಗೀಲ್ ವರದಿ ಬಳಿಕ ಕಸ್ತೂರಿ ರಂಗನ್ ವರದಿಗಳು ಬಂದಿವೆ. 2019, 2020 ರಲ್ಲಿ ಎರಡು ಸಲ ಕಸ್ತೂರಿ ರಂಗನ್ ವರದಿ ಒಪ್ಪಲ್ಲ ಅಂತ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಇಷ್ಟಿದ್ರೂ ಕೇಂದ್ರ ಐದನೇಯ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸ್ಪೀಕರ್ ಕಾಗೇರಿ, ಸಚಿವರಾದ ಶಿವರಾಂ ಹೆಬ್ಬಾರ್, ಆನಂದ್ ಸಿಂಗ್ ಸೇರಿದಂತೆ ಸುಮಾರು 30 ಶಾಸಕರು ಪಾಲ್ಗೊಂಡಿದ್ದರು. ಇವತ್ತಿನ ಸಭೆಯಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮತ್ತೊಮ್ಮೆ ಚರ್ಚೆ ನಡೆಸ್ತೇವೆ. ಜುಲೈ 25, 26 ರಂದು ಸಿಎಂ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಹೋಗ್ತೀವಿ. ಕಸ್ತೂರಿ‌ರಂಗನ್ ವರದಿ‌ ಜಾರಿಗೆ ವಿರೋಧ ಮಾಡ್ತೇವೆ‌ ಎಂದರು.

ಅವೈಜ್ಞಾನಿಕ ವರದಿ ಒಪ್ಪಲ್ಲ:ಈ ಮುಂಚೆಯೂ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದೇವೆ. ಅಲ್ಲದೆ ಕೇಂದ್ರದ ಸಚಿವರನ್ನು ಭೇಟಿಯಾಗಿ ಇದನ್ನು ರದ್ದು ಮಾಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಮತ್ತೆ ಪಶ್ಚಿಮ ಘಟ್ಟದ ಶಾಸಕರ ನೇತೃತ್ವದ ನಿಯೋಗ ದೆಹಲಿಗೆ ತೆರಳಲು ನಿರ್ಧಾರ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ಅವೈಜ್ಞಾನಿಕ ವರದಿ ಒಪ್ಪೋದಕ್ಕೆ ಸಾಧ್ಯ ಇಲ್ಲ ಎಂದು ತಿಳಿಸಿದರು.

ಏನಿದು ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆ?:ಪಶ್ಚಿಮ‌ ಘಟ್ಟಗಳ ಪರಿಸರ ರಕ್ಷಣೆ ಸಂಬಂಧ ವರದಿ ನೀಡುವ ಉದ್ದೇಶದಿಂದ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು‌. 2013ರಲ್ಲಿ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಸಲ್ಲಿಸಿತ್ತು. ಪಶ್ಚಿನ ಘಟ್ಟ ಸಂಬಂಧ ಸಲ್ಲಿಸಿದ ವರದಿ ಹಲವು ರಾಜ್ಯ ಸರ್ಕಾರಗಳ ನಿದ್ದೆಗೆಡಿಸಿದೆ.

ಇದಕ್ಕೂ ಮುಂಚೆ ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾದವ ಗಾಡ್ಗಿಲ್‍ರ ಅಧ್ಯಕ್ಷತೆಯಲ್ಲಿ ಕೆಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು. ಅವರು 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.‌ ಆದರೆ, ವರದಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ 2013ರಲ್ಲಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚಿಸಿ ಪರಿಷ್ಕೃತ ವರದಿ ನೀಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ಕಸ್ತೂರಿ ರಂಗನ್‍ ಸಮಿತಿ ವರದಿಯಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯ ಒಟ್ಟು 59,949 ಸಾವಿರ ಚ.ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವಂತೆ ಶಿಫಾರಸು ಮಾಡಲಾಗಿತ್ತು. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸುವಂತೆ ಸೂಚಿಸಿತ್ತು. ವರದಿ ಜಾರಿಯಾದರೆ ಈಗಿರುವ ಎಲ್ಲ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ.ಮೀ.ಗಿಂತ ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.

ಇದನ್ನೂ ಓದಿ:ಜಿಎಸ್​ಟಿ ಏರಿಕೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ : ಹೆಚ್​ಡಿಕೆ ವಾಗ್ದಾಳಿ

ಇಎಸ್​ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಿಗೆ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟ್​, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಕೇಂದ್ರ ಪರಿಸರ ಸಚಿವಾಲಯ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಮತ್ತೊಂದು ಕರಡು ಅಧಿಸೂಚನೆ ಹೊರಡಿಸಿದೆ.

ಕರ್ನಾಟಕದ ಎಷ್ಟು ಪ್ರದೇಶ ವ್ಯಾಪ್ತಿಗೆ ಒಳಪಡುತ್ತೆ?:ಈ ವರದಿಯನ್ವಯ ಕರ್ನಾಟಕ ರಾಜ್ಯದ 1,553ಕ್ಕೂ ಹೆಚ್ಚು ಹಳ್ಳಿಗಳ 20,668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ (Ecologically Sensitive Area (ESA) zones)ದಲ್ಲಿ ಸೇರಿದೆ. ಈ ಕರಡು ಅಧಿಸೂಚನೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ 62 ಹೆಕ್ಟೇರ್, ಚಾಮರಾಜನಗರದ ಗುಂಡ್ಲುಪೇಟೆಯ 21 ಹೆಕ್ಟೇರ್, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು 27 ಹೆಕ್ಟೇರ್, ಕೊಪ್ಪ 32 ಹೆಕ್ಟೇರ್, ಮೂಡಿಗೆರೆ 27 ಹೆಕ್ಟೇರ್, ದ.ಕನ್ನಡದ ಬೆಳ್ತಂಗಡಿ 17 ಹೆಕ್ಟೇರ್, ಪುತ್ತೂರು 11 ಹೆಕ್ಟೇರ್, ಸುಳ್ಯ 18 ಹೆಕ್ಟೇರ್,ಕೊಡಗು ಜಿಲ್ಲೆಯ ಮಡಿಕೇರಿ 23 ಹೆಕ್ಟೇರ್, ಸೋಮವಾರಪೇಟೆಯ 11 ಹೆಕ್ಟೇರ್, ವಿರಾಜಪೇಟೆಯ 21 ಹೆಕ್ಟೇರ್, ನರಸಿಂಹರಾಜಪುರ 35 ಹೆಕ್ಟೇರ್, ಶೃಂಗೇರಿ 26 ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿತವಾಗುತ್ತದೆ.

ಅದೇ ರೀತಿ ಹಾಸನ ಜಿಲ್ಲೆಯ ಆಲೂರು 1 ಹೆಕ್ಟೇರ್, ಸಕಲೇಶಪುರ 34 ಹೆಕ್ಟೇರ್, ಉ.ಕನ್ನಡ ಜಿಲ್ಲೆಯ ಆಂಕೋಲಾ 43 ಹೆಕ್ಟೇರ್, ಭಟ್ಕಳ 28 ಹೆಕ್ಟೇರ್, ಹೊನ್ನಾವರ 44 ಹೆಕ್ಟೇರ್, ಜೋಯ್ಡಾ 110 ಹೆಕ್ಟೇರ್, ಕಾರವಾರ 39 ಹೆಕ್ಟೇರ್, ಕುಮ್ಟಾ 43 ಹೆಕ್ಟೇರ್, ಸಿದ್ದಾಪುರ 107 ಹೆಕ್ಟೇರ್, ಶಿರಸಿ 125 ಹೆಕ್ಟೇರ್, ಯಲ್ಲಾಪುರ 87 ಹೆಕ್ಟೇರ್, ಮೈಸೂರಿನ ಎಚ್.ಡಿ.ಕೋಟೆ 62 ಹೆಕ್ಟೇರ್, ಶಿವಮೊಗ್ಗದ ಹೊಸನಗರ 126 ಹೆಕ್ಟೇರ್, ಸಾಗರ 134 ಹೆಕ್ಟೇರ್, ಶಿಕಾರಿಪುರ 12 ಹೆಕ್ಟೇರ್, ಶಿವಮೊಗ್ಗ 66 ಹೆಕ್ಟೇರ್, ತೀರ್ಥಹಳ್ಳಿ 146 ಹೆಕ್ಟೇರ್, ಉಡುಪಿಯ ಕಾರ್ಕಳ 13 ಹೆಕ್ಟೇರ್ ಕುಂದಾಪುರದ 24 ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತವೆ.

ರಾಜ್ಯದ ಮೇಲಾಗುವ ಪರಿಣಾಮ ಏನು?: ಕಸ್ತೂರಿ ರಂಗನ್ ಅವರ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಈ ಪ್ರದೇಶಗಲ್ಲಿ ಮಾನವ ಚಟುವಟಿಕೆಗಳಿಗೆ ಬಹುತೇಕ ನಿರ್ಬಂಧ ಹೇರಲಾಗುತ್ತದೆ. ಈ ಪ್ರದೇಶಗಳ ಭೂ ಭಾಗ ರಾಜ್ಯದ ನಿಯಂತ್ರಣ ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಬರುತ್ತದೆ.

ABOUT THE AUTHOR

...view details