ಬೆಂಗಳೂರು:ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳ-ಕೊಳ್ಳ-ತೊರೆಗಳು ತುಂಬಿ ಹರಿಯುತ್ತಿವೆ. ಶೇ.71ಕ್ಕೂ ಹೆಚ್ಚು ಪ್ರಮುಖ ಕೆರೆಗಳು ಮೈದುಂಬಿವೆ. ಲಭ್ಯ ಮಾಹಿತಿಯ ಪ್ರಕಾರ, ರಾಜ್ಯದ 25 ಜಿಲ್ಲೆಗಳಲ್ಲಿರುವ 10,500ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಕೆರೆಗಳಲ್ಲಿ 7,522 ಪ್ರಮುಖ ಕೆರೆಗಳು ಮಳೆಗಾಲ ಮುಗಿಯುವ ಮುನ್ನವೇ ಭರ್ತಿಯಾಗಿವೆ.
ಮಂಡ್ಯ: ಜಿಲ್ಲೆಯಲ್ಲಿ 1,024 ಕೆರೆಗಳಿದ್ದು ಬಹುತೇಕ ಕೆರೆಗಳು ಭರ್ತಿಯಾಗಿವೆ. ಸುಮಾರು 600ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿದ್ದರೆ, ಮಳೆ ನೀರಿನ ರಭಸಕ್ಕೆ ನೂರಾರು ಕೆರೆಗಳು ಒಡೆದುಹೋಗಿವೆ. ಮಳೆಯಾಶ್ರಿತ ಪ್ರದೇಶದಲ್ಲಿದ್ದ ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ. ಕೆ.ಆರ್.ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿಯ ನಾಲ್ಕೈದು ಕೆರೆಗಳು ಭರ್ತಿಯಾದ ಸಂತಸದಲ್ಲಿ ರೈತರಿದ್ದರು. ಆದರೆ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಆ ಕೆರೆಗಳು ಒಡೆದು ಖಾಲಿಯಾಗಿವೆ.
ಹಾಸನ:ಜಿಲ್ಲೆಯಲ್ಲಿ 250ರಲ್ಲಿ 200 ಕೆರೆಗಳು ಭರ್ತಿಯಾಗಿದ್ದರೆ, ತುಮಕೂರು ಜಿಲ್ಲೆಯ 371 ಕೆರೆಗಳ ಪೈಕಿ 240 ಕೆರೆಗಳು ಭರ್ತಿಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ 64 ಪ್ರಮುಖ ಕೆರೆಗಳಲ್ಲಿ 17 ಕೆರೆಗಳು ಭರ್ತಿಯಾಗಿವೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 49 ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ.
ರಾಮನಗರ ಜಿಲ್ಲೆಯಲ್ಲಿರುವ ಒಟ್ಟು 1,451 ಕೆರೆಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಗೆ 1,281 ಭರ್ತಿಯಾಗಿವೆ. ಜಿಲ್ಲೆಯಲ್ಲಿ ಅತಿ ದೊಡ್ಡ ಕೆರೆಗಳಾದ ಮಾಗಡಿ ತಾಲೂಕು ಕುದೂರು ಹೋಬಳಿಯ ಮಾಯಸಂದ್ರ ಕೆರೆ 20 ವರ್ಷಗಳ ನಂತರ ಕೋಡಿ ಬಿದ್ದಿದೆ. ರಾಮನಗರ ತಾಲೂಕಿನ ಕೇತೋಹಳ್ಳಿ ಕೆರೆ 15 ವರ್ಷಗಳ ನಂತರ ಮೈದುಂಬಿಕೊಂಡಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಭಾರೀ ಮಳೆ: ಹಲವೆಡೆ ಮುಂದುವರೆದ ಭೂ ಕುಸಿತ
ಕೋಲಾರ ಜಿಲ್ಲೆಯಲ್ಲಿ 2,500ಕ್ಕೂ ಹೆಚ್ಚು ಕೆರೆಗಳಿದ್ದು, ಬಹುತೇಕ ಕೆರೆಗಳು ಭರ್ತಿಯಾಗಿವೆ. ಕಳೆದ ವರ್ಷವೇ ಇಲ್ಲಿ ಕೆಸಿ ವ್ಯಾಲಿ ನೀರು ಹರಿದು ಬಂದಿದ್ದರಿಂದ ನೀರಿನ ಪ್ರಮಾಣ ಹೆಚ್ಚಿತ್ತು. ಈ ಬಾರಿ ನಿರಂತರ ಮಳೆಗೆ 1,875ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿವೆ. ಕಳೆದ ವರ್ಷ ಬಿದ್ದ ಮಳೆಯಿಂದಲೇ ಕೋಲಾರಮ್ಮನ ಕೆರೆ, ಕಣ್ಣೂರು ಕೆರೆಯೂ ಸೇರಿದಂತೆ ಇಲ್ಲಿನ ಬಹುತೇಕ ಕೆರೆಗಳು 25 ವರ್ಷಗಳ ನಂತರ ಕೋಡಿ ಬಿದ್ದಿವೆ.
ಉತ್ತರ ಕರ್ನಾಟಕ:ಈ ಭಾಗದ ಬೆಳಗಾವಿ ಜಿಲ್ಲೆಯ ಒಟ್ಟು 288 ಕೆರೆಗಳಲ್ಲಿ 118 ಕೆರೆಗಳು ಭರ್ತಿಯಾಗಿದ್ದರೆ, ವಿಜಯಪುರ ಜಿಲ್ಲೆಯ ಒಟ್ಟು 156 ಕೆರೆಗಳಲ್ಲಿ 108 ಕೆರೆಗಳು ಭರ್ತಿಯಾಗಿವೆ. ಬಾಗಲಕೋಟೆ ಜಿಲ್ಲೆಯ ಒಟ್ಟು 62 ಕೆರೆಗಳಲ್ಲಿ 32 ಕೆರೆಗಳು ಭರ್ತಿಯಾಗಿವೆ. ಧಾರವಾಡ ಜಿಲ್ಲೆಯಲ್ಲಿ 260 ಕೆರೆಗಳಿದ್ದು, 80 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ 492 ಕೆರೆಗಳಲ್ಲಿ 492 ಕೆರೆಗಳೂ ಭರ್ತಿಯಾಗಿವೆ. ಹಾವೇರಿ ಜಿಲ್ಲೆಯ 1,146 ಕೆರೆಗಳಲ್ಲಿ 300, ಗದಗ ಜಿಲ್ಲೆಯ 186ರಲ್ಲಿ 86 ಕೆರೆಗಳು ಭರ್ತಿಯಾಗಿವೆ.
ಕಲ್ಯಾಣ ಕರ್ನಾಟಕ:ಈ ಭಾಗದ ರಾಯಚೂರು ಜಿಲ್ಲೆಯಲ್ಲಿ 350 ಕೆರೆಗಳಿದ್ದು, 350 ಭರ್ತಿಯಾಗಿವೆ. ಕಲಬುರಗಿ ಜಿಲ್ಲೆಯಲ್ಲಿ 166 ಕೆರೆಗಳಿದ್ದು, 100ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಯಾದಗಿರಿ ಜಿಲ್ಲೆಯ 100ಕ್ಕೂ ಹೆಚ್ಚು ಕೆರೆಗಳಲ್ಲಿ 72 ಕೆರೆಗಳು ಭರ್ತಿಯಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ 16 ದೊಡ್ಡ ಕೆರೆಗಳಿದ್ದು, ಅವುಗಳಲ್ಲಿ 5 ಭರ್ತಿಯಾಗಿವೆ. ವಿಜಯನಗರ ಜಿಲ್ಲೆಯಲ್ಲಿ 15 ಕೆರೆಗಳಿದ್ದು, ಅದರಲ್ಲಿ 7 ಕೆರೆಗಳು ಭರ್ತಿಯಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ 280 ಕೆರೆಗಳಿದ್ದು, ಕೇವಲ 1 ಕೆರೆ ಮಾತ್ರ ಭರ್ತಿಯಾಗಿದೆ.
ಕರಾವಳಿ ಭಾಗ: ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿಯಲ್ಲಿ 100ಕ್ಕೂ ಹೆಚ್ಚು ಕೆರೆಗಳಿದ್ದು, ಸುಮಾರು 80 ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 654 ಕೆರೆಗಳಿದ್ದು, ಅಷ್ಟೂ ಭರ್ತಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ 12 ಪ್ರಮುಖ ಕೆರೆಗಳು ಭರ್ತಿಯಾಗಿವೆ. ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯಲ್ಲಿ 124 ಕೆರೆಗಳಿದ್ದು, 86 ಕೆರೆಗಳು ಕೋಡಿ ತುಂಬಿ ಬಿದ್ದಿವೆ. ಕೊಡಗು ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ದೊಡ್ಡಮಟ್ಟದ ಕೆರೆಗಳು ಭರ್ತಿಯಾಗಿವೆ.