ಬೆಂಗಳೂರು: "ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಬಹುಕೋಟಿ ಮೊತ್ತದ ಗಂಭೀರ ಸ್ವರೂಪದ 14 ಪ್ರಕರಣಗಳನ್ನು ಮರು ತನಿಖೆ ನಡೆಸಬೇಕು. ಜೊತೆಗೆ, ರಾಜ್ಯ ಸರ್ಕಾರ ಈ ಕೂಡಲೇ ಸಿಐಡಿ ತನಿಖೆಗೂ ಆದೇಶಿಸಬೇಕು" ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಸರ್ಕಾರವನ್ನು ಒತ್ತಾಯಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
"2013 ರಿಂದ 2018 ರವರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವಿತ್ತು. ಈ ಸಂದರ್ಭದಲ್ಲಿ 121 ಬೃಹತ್ ಹಗರಣಗಳಿಗೆ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ದಾಖಲಿಸಲಾಗಿತ್ತು. ಆದರೆ ಪ್ರಭಾವಕ್ಕೆ ಒಳಗಾಗಿದ್ದ ಕೆಲ ಅಧಿಕಾರಿಗಳು 14 ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ" ಎಂದು ದೂರಿದರು. "ಸಿದ್ದರಾಮಯ್ಯ ಮಾತ್ರವಲ್ಲ, ಆಗಿನ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ.ಖಾದರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆ, ಎಸಿಬಿಯ ಕೆಲ ಅಧಿಕಾರಿಗಳು, ದೂರುದಾರರಿಂದ ಯಾವುದೇ ಹೇಳಿಕೆಗಳನ್ನು ಪಡೆದುಕೊಳ್ಳದೇ ಏಕಾಏಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
ಆರೋಪಗಳೇನು?: "ಮಳೆ ಆಧಾರಿತ ಕೃಷಿ ಭೂಮಿಗಳನ್ನು ಹೊಂದಿರುವ ಜಮೀನುಗಳಿಗೆ ಉಚಿತವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವ ಹೆಸರಿನಲ್ಲಿ 800 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಕೃಷಿ ಭಾಗ್ಯ ಹಗರಣ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳ ಡಸ್ಟ್ ಬಿನ್ ಅಳವಡಿಕೆ ಹೆಸರಿನಲ್ಲಿ ನಡೆದಿರುವ 200 ಕೋಟಿ ಹಗರಣ, ಕಾನೂನು ರೀತಿಯಲ್ಲಿ ನಿಗದಿತ ಶುಲ್ಕ ಪಾವತಿಸದೇ 2013 ರಿಂದ 2018 ರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಬಸ್ ಶೆಟರ್ಗಳನ್ನು ತಮ್ಮ ಸರ್ಕಾರದ ಮತ್ತು ತಮ್ಮ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಬಳಸಿಕೊಂಡು 35 ಕೋಟಿ ರೂಪಾಯಿ ಜಾಹೀರಾತು ಶುಲ್ಕ ವಂಚಿಸಿರುವ ಹಗರಣಗಳಿವು" ಎಂದು ಅವರು ಹೇಳಿದರು.