ಕರ್ನಾಟಕ

karnataka

ETV Bharat / state

ಹೈದರಾಬಾದ್​ನಿಂದ ಆ್ಯಪಲ್ ಏರ್ಪಾಡ್ ಘಟಕ ಬೆಂಗಳೂರಿಗೆ ಸ್ಥಳಾಂತರ ಕೋರಿ ಬರೆದ ಪತ್ರ ನಕಲಿ: ಡಿಕೆಶಿ

DK Shivakumar Reaction on Fake Letter: ಆ್ಯಪಲ್ ಏರ್ಪಾಡ್ ಉತ್ಪಾದನಾ ಘಟಕವನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವಂತೆ ನಾನು ಬರೆದಿದ್ದೇನೆ ಎಂಬ ಪತ್ರವು ನಕಲಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

not-written-a-letter-requesting-relocation-of-apple-airpod-unit-to-bengaluru-dk-shivakumar
ಹೈದರಾಬಾದ್​ನಿಂದ ಆ್ಯಪಲ್ ಏರ್ಪಾಡ್ ಘಟಕ ಬೆಂಗಳೂರಿಗೆ ಸ್ಥಳಾಂತರ ಕೋರಿ ಬರೆದ ಪತ್ರ ನಕಲಿ: ಡಿಕೆಶಿ

By ETV Bharat Karnataka Team

Published : Nov 4, 2023, 8:47 PM IST

Updated : Nov 4, 2023, 10:48 PM IST

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು:ಆ್ಯಪಲ್ ಏರ್ಪಾಡ್ ಉತ್ಪಾದನಾ ಘಟಕವನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಳಿಸುವಂತೆ ಕೋರಿ ಫಾಕ್ಸ್ ಕಾನ್‌‌ ಸಂಸ್ಥೆಗೆ ಬರೆದಿದ್ದೇನೆ ಎನ್ನಲಾದ ಪತ್ರ ನಕಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಬರೆದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪತ್ರ ನಕಲಿಯಾಗಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದರು.

ತೆಲಂಗಾಣ ಸಿಎಂ ಈ ಪತ್ರವನ್ನು ಉಲ್ಲೇಖಿಸಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಅಷ್ಟು ಗಾಬರಿಯಾಗಿದ್ದಾರೆ. ಅವರು ಈ ನಕಲಿ ಪತ್ರವನ್ನು ಸೃಷ್ಟಿಸಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ ಆ ಪತ್ರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದೊಂದು ನಕಲಿ ಪತ್ರ. ನನ್ನ ಲೆಟರ್ ಹೆಡ್ ಬೇರೆಯದೇ ವಿನ್ಯಾಸ ಹೊಂದಿದೆ. ನನ್ನ ಲೆಟರ್ ಹೆಡ್ ಸಂಖ್ಯೆಯನ್ನು ಹೊಂದಿದೆ. ಅದು ಹಸಿರು ಬಣ್ಣದಲ್ಲಿ ಇಲ್ಲ. ಯಾವೊಬ್ಬ ಶಾಸಕರೂ ಈ ಹಸಿರು ಬಣ್ಣದ ಲೆಟರ್ ಹೆಡ್ ಬಳಸುತ್ತಿಲ್ಲ. ಆದರೆ, ಏಕೆ ಬಿಆರ್​​ಎಸ್ ಪಕ್ಷದವರು ಈ ಮಟ್ಟಕ್ಕೆ ಹೋಗಿದ್ದಾರೆ ಎಂದು ಗೊತ್ತಿಲ್ಲ ಎಂದರು.

ಆ ಪತ್ರದ ಬಗ್ಗೆ ತೆಲಂಗಾಣ ಸಿಎಂ ಪ್ರತಿಕ್ರಿಯಿಸಿದ್ದಾರೆ. ನನ್ನ ಕಾರ್ಯದರ್ಶಿಗೆ ಈ ಸಂಬಂಧ ದೂರು ನೀಡಲು ಹೇಳಿದ್ದೆ. ಯಾರೋ ಈ ಲೆಟರ್ ಹೆಡ್​ನ್ನು ದುರ್ಬಳಕೆ ಮಾಡಿದ್ದಾರೆ. ನನ್ನ ಎಲೆಕ್ಟ್ರಾನಿಕ್ ಸಹಿಯನ್ನು ಅಕ್ರಮವಾಗಿ ಬಳಿಸಿದ್ದಾರೆ. ನಾನು ಫಾಕ್ಸ್ ಕಾನ್ ಸಂಸ್ಥೆಗೆ ಯಾವುದೇ ತರಹದ ಪತ್ರ ಬರೆದಿಲ್ಲ. ನಮ್ಮ‌ ರಾಜ್ಯದಲ್ಲಿ ಹಲವರು ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ಇದೇ ವೇಳೆ ಶಿವಕುಮಾರ್ ತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್​ಗೂ ನೋಟಿಸ್​:ಮುಂದುವರೆದು ಮಾತನಾಡಿದ ಡಿಸಿಎಂ, ನನಗೆ ಯಾವ ಬೆಂಬಲವೂ ಬೇಡ, ಯಾವ ಶಾಸಕರೂ ಬೇಡ ಎಂದರು. ನನ್ನ ಪರವಾಗಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್​ಗೂ ಕೂಡ ನೋಟಿಸ್ ಜಾರಿ ಮಾಡುತ್ತೇನೆ. ಪಕ್ಷದಲ್ಲಿ ಶಿಸ್ತು ಇರಬೇಕು. ನನ್ನ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಕ್ಷ ಚುನಾವಣೆ ನಡೆಸಿದ್ದು, ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ನಮಗೆ ಜನ ಆಶೀರ್ವಾದ ಮಾಡಿದ್ದು ಉತ್ತಮ ಆಡಳಿತ ನೀಡುವುದು ನಮ್ಮ ಗುರಿ. ನನಗೆ ಯಾವುದಕ್ಕೂ ಆತುರವಿಲ್ಲ. ನಾನು ಯಾರಿಗೂ ಬೆಂಬಲ ನೀಡಿಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ಪಕ್ಷದ ನಾಯಕರಿಗೆ ಏನು ಹೇಳಬೇಕೋ ಹೇಳಿದ್ದೇವೆ ಎಂದು ತಿಳಿಸಿದರು.

ನಕಲಿ ಪತ್ರದಲ್ಲಿ ಏನಿತ್ತು?:ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫಾಕ್ಸ್ ಕಾನ್ ಸಂಸ್ಥೆಗೆ ಡಿಕೆಶಿ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಫಾಕ್ಸ್ ಕಾನ್ ತನ್ನ ಆ್ಯಪಲ್ ಏರ್ಪಾಡ್ ಉತ್ಪಾದನಾ ಘಟಕವನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಳಿಸಿ. ಇದು ಪರಸ್ಪರ ಅಪಾರ ಲಾಭವನ್ನು ತರಲಿದೆ. ಬೆಂಗಳೂರಿಗೆ ಸ್ಥಳಾಂತರವಾದರೆ ಸಂಸ್ಥೆಯ ಅಂತಾರಾಷ್ಟ್ರೀಯ ಇಮೇಜ್ ಹೆಚ್ಚಲಿದೆ ಎಂದು ಉಲ್ಲೇಖಿಸಲಾಗಿದೆ.

ಹೈದರಾಬಾದ್​​ಗೆ ಹೋಲಿಸಿದರೆ ಬೆಂಗಳೂರು ಸುರಕ್ಷಿತವಾಗಿದ್ದು, ಪ್ರತಿಷ್ಠಿತ ಐಟಿ ಉದ್ಯಮಗಳಿಗೆ ಹೆಸರುವಾಸಿಯಾಗಿದೆ. ಹೈದರಾಬಾದ್​​ನಲ್ಲಿನ ಕೋಮು ಸಂಘರ್ಷಗಳಿಂದ ನಿಮ್ಮ ಉದ್ಯಮಕ್ಕೆ ಸಂಭಾವ್ಯ ಅಪಾಯ ತರಲಿದೆ. ಜೊತೆಗೆ ಹೈದರಾಬಾದ್​​ನಲ್ಲಿನ ಅನೇಕ ಅಂತಾರಾಷ್ಟ್ರೀಯ ಕೈಗಾರಿಕೆಗಳು ಬೆಂಗಳೂರಿಗೆ ತಮ್ಮ ಘಟಕಗಳನ್ನು ಸ್ಥಳಾಂತರಿಸಲು ಮುಂದಾಗಿದೆ. ತೆಲಂಗಾಣದಲ್ಲಿ ನಾವು ನಮ್ಮದೇ ಸ್ನೇಹಪರ ಸರ್ಕಾರವನ್ನು ರಚಿಸಲಿದ್ದು, ಅಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎಂಬ ಭರವಸೆ ನೀಡುತ್ತೇನೆ. ನೀವು ಹೈದರಾಬಾದ್​​ನಿಂದ ಆ್ಯಪಲ್ ಏರ್ಪಾಡ್ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸುವುದನ್ನು ಎದುರು ನೋಡುತ್ತಿದ್ದೇನೆ ಎಂದು ವೈರಲ್​ ಆದ ಪತ್ರದಲ್ಲಿ ಬರೆಯಲಾಗಿತ್ತು.

ಇದನ್ನೂ ಓದಿ:ಹೆಚ್​​ಡಿಕೆ ಎನ್​ಡಿಎಯಿಂದ ಆಚೆ ಬಂದು ನನಗೆ ಬೆಂಬಲ ನೀಡುವ ಬಗ್ಗೆ ಮಾತನಾಡಲಿ: ಶಿವಕುಮಾರ್ ಡಿಚ್ಚಿ

Last Updated : Nov 4, 2023, 10:48 PM IST

ABOUT THE AUTHOR

...view details