ಬೆಂಗಳೂರು: ನಗರದ ಥಣಿಸಂದ್ರದಲ್ಲಿರುವ 16 ಮಸೀದಿಗಳಿಂದ ವಿಪರೀತ ಶಬ್ದ ಮಾಲಿನ್ಯವಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಥಣಿಸಂದ್ರ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ವಾದ ಆಲಿಸಿದ ಪೀಠ, ಸರ್ಕಾರ, ಕೆಎಸ್ ಪಿಸಿಬಿ, ನಗರ ಪೊಲೀಸ್ ಆಯುಕ್ತರು ಹಾಗೂ ಸಂಬಂಧಿತ ಪೊಲೀಸ್ ಠಾಣೆಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು. ಅರ್ಜಿದಾರರ ಆರೋಪ - ನಗರದ ಥಣಿಸಂದ್ರ, ರಾಚೇನಹಳ್ಳಿ, ನಾಗವಾರ, ಎಚ್‌ಆರ್‌ಬಿಆರ್ ಲೇಔಟ್ ಮತ್ತು ಸಿಂತನ್ ನಗರದಲ್ಲಿ 16 ಮಸೀದಿಗಳು ಇವೆ.
ಇಲ್ಲೆಲ್ಲಾ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡಲಾಗುತ್ತಿದೆ. ಧ್ವನಿವರ್ಧಕಗಳು ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಡಿಸುತ್ತಿವೆ. ಇದರಿಂದ ಮಸೀದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಪರೀತ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅರ್ಜಿದಾರರಿಗೆ ಎಲ್ಲಾ ಧರ್ಮಗಳ ಮೇಲೂ ಗೌರವವಿದೆ. ಆದರೂ, ಅತಿಯಾದ ಶಬ್ದ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ.
ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮತ್ತು ಕೆಎಸ್‌ಪಿಸಿಬಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಪೊಲೀಸರು, ಕೆಎಸ್‌ಪಿಸಿಬಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆದ್ದರಿಂದ ಮಸೀದಿಯಲ್ಲಿ ಬಳಕೆ ಮಾಡುತ್ತಿರುವ ಧ್ವನಿವರ್ಧಕಗಳನ್ನು ವಶಕ್ಕೆ ಪಡೆಯಬೇಕು. ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಪಾಲನೆ ಮಾಡುವಂತೆ ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.