ರಾಷ್ಟ್ರ ಧ್ವಜಾರೋಹಣಕ್ಕೆ ಸೂಚನೆ,ಕನ್ನಡ ಧ್ವಜದ ಬಗ್ಗೆ ಉಲ್ಲೇಖ ಇಲ್ಲ: ಗೊಂದಲದಲ್ಲಿ ಶಿಕ್ಷಕರು - kannada flag news
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ನಾಳೆ ಬೆಳಗ್ಗೆ 8 ಗಂಟೆಗೆ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು, ಭುವನೇಶ್ವರಿ ದೇವಿ ಪೂಜೆ ಹಾಗು ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು. ಈ ವೇಳೆ ಶಾಲಾ ಶಿಕ್ಷಕರೂ ಕೂಡ ಕಡ್ಡಾಯವಾಗಿ ಹಾಜರಿರಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ ಸುತ್ತೋಲೆಯಲ್ಲಿ ಎಲ್ಲಿಯೂ ಕನ್ನಡಾಂಬೆಯ ಧ್ವಜ ಅಥವಾ ನಾಡಧ್ವಜದ ಪ್ರಸ್ತಾಪ ಮಾಡಿಲ್ಲ, ನಾಡ ಧ್ವಜಾರೋಹಣ ಮಾಡಬೇಕೋ ಅಥವಾ ಬೇಡವೋ ಎನ್ನುವ ಮಾಹಿತಿ ಇಲ್ಲದ ಕಾರಣ ಗೊಂದಲ ಸೃಷ್ಟಿಯಾಗಿದೆ.
ಇನ್ನೊಂದೆಡೆ 2008 ರಲ್ಲಿ ಹೊರಡಿಸಲಾಗಿದ್ದ ಸರ್ಕಾರಿ ಆದೇಶ ಈಗ ವೈರಲ್ ಆಗಿದೆ. ರಾಷ್ಟ್ರೀಯ ಧ್ವಜ ಸಂಹಿತೆ ಪ್ರಕಾರ ರಾಜ್ಯಗಳು ಪ್ರತ್ಯೇಕವಾಗಿ ಧ್ವಜಾರೋಹಣ ಮಾಡಿದರೆ ರಾಷ್ಟ್ರೀಯ ಧ್ವಜದ ಪ್ರಾಮುಖ್ಯತೆಗೆ ಚ್ಯುತಿ ಬರಲಿದೆ. ಕರ್ನಾಟಕವು ರಾಷ್ಟ್ರೀಯ ಧ್ವಜ ಸಂಹಿತೆ ಅಡಿಯಲ್ಲಿ ಬರುವ ಕಾರಣ ಸರ್ಕಾರಿ ಸಮಾರಂಭದಲ್ಲಿ ರಾಷ್ಟ್ರಧ್ವಜ ಮಾತ್ರ ಹಾರಿಸಬೇಕು. ಅದರಂತೆ ಕನ್ನಡ ರಾಜ್ಯೋತ್ಸವ ದಿನಾಚರಣೆ ವೇಳೆ ಕೇವಲ ರಾಷ್ಟ್ರ ಧ್ವಜಾರೋಹಣ ಮಾತ್ರ ನೆರವೇರಿಸಬೇಕು ಎಂದು ಹೊರಡಿಸಿದ್ದ ಆದೇಶದ ಪ್ರತಿ ಈಗ ಎಲ್ಲೆಡೆ ಹರಿದಾಡುತ್ತಿದೆ.