ಬೆಂಗಳೂರು:ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯವೆಸಗಲು ತಯಾರಾಗಿದ್ದ ಐಎಸ್(ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಯ ಸದಸ್ಯರು ಸದ್ಯ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶದಲ್ಲಿದ್ದು, ಇವರ ವಿಚಾರಣೆ ನಡೆಸಿದಾಗ ಕೆಲ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ಎನ್ಐಎ ಅಧಿಕಾರಿಗಳು ಕೊಂಚ ಯಾಮಾರಿದ್ದರೂ, ದೊಡ್ಡ ಅನಾಹುತ ನಡೆಸಲು ಈ ಶಂಕಿತ ಉಗ್ರರು ಸಿದ್ಧರಾಗಿದ್ದರು. ಬಂಧಿತ ಆರೋಪಿಗಳು ಐಎಸ್ ಉಗ್ರರ ಜೊತೆ ಸೇರಿಕೊಂಡು ಕರ್ನಾಟಕದ ಮುಸ್ಲಿಂ ಯುವಕರ ಬ್ರೈನ್ ವಾಶ್ ಮಾಡಿ ನಗರದ ಪ್ರತಿಷ್ಟಿತ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ಎಸಗುವ ಯೋಜನೆ ಹಾಕಿಕೊಂಡಿದ್ದರಂತೆ.
ಹೆಸರಿಗೆ ಅಕ್ಕಿ ವ್ಯಾಪಾರಿ, ಆದರೆ ಈತ ಮಾಡ್ತಿದ್ದ ಕೆಲಸ ನೋಡಿ ಎನ್ಐಎ ಶಾಕ್!
ಸ್ಥಳೀಯ ಪೊಲೀಸರಿಗೆ ಅನುಮಾನ ಬರಬಾರದೆಂದು ಫ್ರೇಜರ್ ಟೌನ್ ನಿವಾಸಿ ಇರ್ಫಾನ್ ನಾಸೀರ್ ಅಕ್ಕಿ ವ್ಯಾಪಾರಿಯಾಗಿ ಸ್ಥಳೀಯ ಜನರಲ್ಲಿ ಗುರುತಿಸಿಕೊಂಡಿದ್ದ.
ಹಿಂದೂ ಸಂಘಟನೆಗಳ ಕಾರ್ಯಕ್ರಮಗಳು, ದೊಡ್ಡ ದೊಡ್ಡ ರಾಜಕೀಯ ಬೆಳವಣಿಗೆ, ರಾಮ ಮಂದಿರ ತೀರ್ಪು, ಪೌರತ್ವ ಕಾಯ್ದೆ ವೇಳೆ ಮುಸ್ಲಿಂ ಸಮುದಾಯದ ಯುವಕರ ತಲೆಗಳಿಗೆ ಹುಳ ಬಿಟ್ಟು ಘೋರ ಕೃತ್ಯ ಮಾಡಲಿ ಎಂದು ಈತ ಪ್ರೇರೇಪಿಸುತ್ತಿದ್ದನಂತೆ.
ಈತನ ಜೊತೆ ಅಹಮ್ಮದ್ ಅಬ್ದುಲ್ ಖಾದರ್ ಎಂಬುವವನು ಹೆಸರಿಗೆ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಾ ಹಣದ ವಹಿವಾಟು ಹಾಗೂ ಇವರು ಮಾಡುವ ಕ್ಯಾಂಪ್ಗಳ ಖರ್ಚು ವೆಚ್ಚದ ಕುರಿತು ನೋಡಿಕೊಳ್ಳುತ್ತಿದ್ದ. ಜೊತೆಗೆ ಮುಸ್ಲಿಂ ಯುವಕರ ತಲೆ ಕೆಡಿಸಿ ಈ ಯುವಕರನ್ನು ಸಿರಿಯಾ ದೇಶಕ್ಕೆ ಕಳುಹಿಸುತ್ತಿದ್ದ ಅನ್ನೋದು ವಿಚಾರಣೆ ವೇಳೆ ತಿಳಿದುಬಂದಿದೆ.
ವಾಟ್ಸಪ್ ಕುರಾನ್ ಗ್ರೂಪ್‌ನಲ್ಲಿ ಚರ್ಚೆ:
ಕುರಾನ್ ವಾಟ್ಸಪ್ ಗ್ರೂಪ್ಗೆ ಸೇರಲು ಎಲ್ಲರಿಗೂ ಅವಕಾಶ ಇರಲಿಲ್ಲ. ಇದು ಬಹಳ ಸೀಕ್ರೆಟ್ ಗ್ರೂಪ್ ಆಗಿದ್ದು, ಇದರಲ್ಲಿ ಸಿರಿಯಾ ವಿಚಾರ, ಐಎಸ್ ಉಗ್ರರ ಅನುಕಂಪದ ವಿಚಾರ, ಧರ್ಮಕ್ಕೆ ಉಂಟಾಗುವ ತೊಂದರೆಗಳು, ಮುಸ್ಲಿಂ ಸಂಘಟನೆ ಉಳಿಸಲು ಏನೆಲ್ಲಾ ಮಾಡಬೇಕು ಎಂಬೆಲ್ಲಾ ಮಾಹಿತಿಯನ್ನು ಚರ್ಚಿಸಲಾಗುತ್ತಿತ್ತು.
ಈ ಗ್ರೂಪ್‌ನಲ್ಲಿ ಪ್ರತಿಯೊಬ್ಬರಿಗೂ ನಂಬಿಕೆ ಬರುವಂತೆ ಮೆಸೇಜ್ ಹಾಗೂ ವಿಡಿಯೋ ಮೂಲಕ ಬ್ರೈನ್ ವಾಷ್ ಮಾಡಲಾಗುತ್ತಿತ್ತು. ಸದ್ಯ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರರ ಮೊಬೈಲ್ ಜಪ್ತಿ ಮಾಡಿ ವಾಟ್ಸಪ್ ಗ್ರೂಪ್‌ನಲ್ಲಿ ಯಾರೆಲ್ಲಾ ಯುವಕರಿದ್ದಾರೆ, ಹೇಗೆಲ್ಲಾ ಪ್ರಚೋದನೆಗೆ ಒಳಗಾಗಿದ್ದರು, ಗುಂಪಿನ ಸದಸ್ಯರು ಯಾವ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂಬೆಲ್ಲಾ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.