ಬೆಂಗಳೂರು: ಹೊಸ ವರ್ಷಾಚರಣೆಗೆ ಒಂದೇ ದಿನ ಬಾಕಿ ಇದ್ದು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಾಹನ ಸವಾರರು ಮತ್ತು ಪಾದಚಾರಿಗಳು ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೈಂಟ್ ಮಾರ್ಕ್ಸ್ ರಸ್ತೆ, ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಸೆಲೆಬ್ರೇಷನ್'ಗಾಗಿ ಜಮಾವಣೆಗೊಳ್ಳುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು ಕೆಲ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರುವ ಸ್ಥಳಗಳು
- ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ ಜನವರಿ 1ರ ಬೆಳಗ್ಗೆ 3ಗಂಟೆಯವರೆಗೂ ಎಂ ಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ.
- ಬ್ರಿಗೇಡ್ ರಸ್ತೆಯ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಒಪೇರಾ ಜಂಕ್ಷನ್ ವರೆಗೆ, ಚರ್ಚ್ ಸ್ಟ್ರೀಟ್‌ನ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ.
- ಮ್ಯೂಸಿಯಂ ರಸ್ತೆಯ, ಎಂ ಜಿ ರಸ್ತೆ ಜಂಕ್ಷನ್ ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆಯ (ಎಸ್.ಬಿ.ಐ) ವೃತ್ತದವರೆಗೆ. ರೆಸ್ಟ್ ಹೌಸ್ ರಸ್ತೆಯಲ್ಲಿ, ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ.
- ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ, ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರ) ದವರೆಗೆ ಪೊಲೀಸ್ ವಾಹನಗಳು ಹಾಗು ಕರ್ತವ್ಯ ನಿರತ ತುರ್ತುಸೇವಾ ವಾಹನಗಳನ್ನ ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರಲಿದೆ.
ವಾಹನಗಳ ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳು
- ಎಂ.ಜಿ ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದವರೆಗೆ.
- ಬ್ರಿಗೇಡ್ ರಸ್ತೆಯಲ್ಲಿ, ಆರ್ಟ್ಸ್ & ಕ್ರಾಫ್ಟ್ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್ ವರೆಗೆ.
- ಚರ್ಚ್ ಸ್ಟ್ರೀಟ್‌ನಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್ ವರೆಗೆ.
- ರೆಸ್ಟ್ ಹೌಸ್ ರಸ್ತೆಯಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ.
- ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆ ಜಂಕ್ಷನ್‌ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದ ವರೆಗೆ ಪೊಲೀಸ್ ವಾಹನಗಳು ಹಾಗು ಕರ್ತವ್ಯ ನಿರತ ತುರ್ತುಸೇವಾ ವಾಹನಗಳನ್ನ ಹೊರತುಪಡಿಸಿ ಉಳಿದ ವಾಹನಗಳ ನಿಲುಗಡೆಗೆ ನಿಷೇಧವಿರಲಿದೆ. ಮತ್ತು ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್,ರೆಸಿಡೆನ್ಸಿ, ರಸ್ತೆ & ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ಈಗಾಗಲೇ ನಿಲ್ಲಿಸಲಾಗಿರುವ ವಾಹನಗಳ ಚಾಲಕರು/ಮಾಲಿಕರು ಡಿಸೆಂಬರ್ 31ರಂದು ಸಂಜೆ 4:00 ಗಂಟೆಯೊಳಗೆ ತಮ್ಮ ವಾಹನಗಳನ್ನ ತೆರುವುಗೊಳಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಭ್ರಮಾಚರಣೆ ಮುಗಿಸಿ ತೆರಳುವವರಿಗೆ ಸೂಚನೆಗಳು;
ಡಿಸೆಂಬರ್ 31ರಂದು ರಾತ್ರಿ 10-00 ಗಂಟೆಯ ನಂತರ ಸಂಚರಿಸುವವರು ಎಂ.ಜಿ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದ ಕಡೆಯಿಂದ - ಹಲಸೂರು ಹಾಗು ಇನ್ನು ಮುಂದಕ್ಕೆ ಹೋಗುವವರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ - ಬಿ ಆರ್ ವಿ ಜಂಕ್ಷನ್ ಬಲ ತಿರುವು ಕಬ್ಬನ್ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.
ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ-ಡಿಕೆನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬಹುದು.