ಕರ್ನಾಟಕ

karnataka

ETV Bharat / state

ರಾಜಭವನದ ಹೊರಗೆ ಪ್ರತಿಧ್ವನಿಸಿತು ಬಿಜೆಪಿ ಅಭಿಮಾನಿಗಳ ಹರ್ಷ, ಶಿಳ್ಳೆ, ಕೇಕೆ - kannada news

ತಮ್ಮ ನೆಚ್ಚಿನ ನಾಯಕರ ಪ್ರಮಾಣವಚ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಜಭವನದ ಮುಂದೆ ಇಂದು ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಹೀಗಾಗಿ ರಾಜಭವನದ ಹೊರಗೆ ಇಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.

ಅಭಿಮಾನಿಗಳ ಹರ್ಷ

By

Published : Aug 20, 2019, 7:33 PM IST

ಬೆಂಗಳೂರು: ರಾಜಭವನ ರಸ್ತೆ ಇಂದು ವಾಹನದ ಬದಲು ಜನರಿಂದ ತುಂಬಿತ್ತು. ನೂತನ ಸಚಿವರ ಪದಗ್ರಹಣ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಹೊರಗೆ ನಿಂತು ವೀಕ್ಷಿಸಿದರು.

ರಾಜಭವನದ ಒಳಗೆ ಕಡಿಮೆ ಪ್ರಮಾಣದ ಅಭಿಮಾನಿಗಳು ಹಾಗೂ ನೂತನ ಸಚಿವರ ಕುಟುಂಬ ಸದಸ್ಯರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಜಿಲ್ಲೆಗಳ ಬಿಜೆಪಿ ಮುಖಂಡರು, ಗ್ರಾಮ ಪಂಚಾಯತ್​, ತಾಲೂಕು ಪಂಚಾಯತ್​ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯರು ಹಾಗೂ ಅಧ್ಯಕ್ಷರುಗಳು ಕೂಡ ರಾಜಭವನದ ಒಳಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಹೊರಗಿನಿಂದಲೇ ಸಮಾರಂಭವನ್ನು ಎಲ್ಇಡಿ ಪರದೆ ಮೂಲಕ ವೀಕ್ಷಿಸಿ, ಸಂಭ್ರಮಿಸಿದರು.

ರಾಜಭವನದ ಹೊರಗೆ ಅಭಿಮಾನಿಗಳ ಹರ್ಷ

ರಾಜಭವನದಲ್ಲಿ ಗೊಂದಲ..
ಪಾಸ್ ಇರುವ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ ಪೊಲೀಸರು ಇಂದು ಜನರ ಕೆಂಗಣ್ಣಿಗೆ ಗುರಿಯಾದರು. ರಾಜಭವನ ಪ್ರವೇಶಕ್ಕೆ ಸುಮಾರು 4,000 ಪಾಸ್​ಗಳನ್ನು ವಿತರಿಸಲಾಗಿತ್ತು. ಆದರೆ ಪೊಲೀಸರಿಗೆ ಸಾವಿರ ಮಂದಿಗೆ ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ನೀಡಿ ಎಂದು ಸೂಚಿಸಲಾಗಿತ್ತು. ಇದರಿಂದಾಗಿ ರಾಜಭವನ ಪ್ರವೇಶಕ್ಕೆ ಪ್ರಯತ್ನಿಸಿದ ಹಲವರು ತಮಗೆ ಅವಕಾಶ ಸಿಗದ ಹಿನ್ನೆಲೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು ಕಂಡುಬಂತು.

ಪಾಸ್ ಹಿಡಿದು ರಾಜಭವನದ ದ್ವಾರದಲ್ಲಿ ನಿಂತಿರೋ ನೂರಾರು ಜನ ಪ್ರಮಾಣವಚನ ಸ್ವೀಕಾರ ನಡೆಯುವುದನ್ನು ಒಳಗೆ ಕುಳಿತು ನೋಡಲಾಗದೆ ಪರಿತಪಿಸುವಂತಾಯಿತು.

ನಗೆಗಡಲಲ್ಲಿ ತೇಲಿಸಿದ ಮಧುಸ್ವಾಮಿ...
ಪ್ರಮಾಣವಚನ ಸ್ವೀಕಾರ ಸಂದರ್ಭ ಬಾಯಿತಪ್ಪಿ ರಾಜ್ಯದ ಮುಖ್ಯಮಂತ್ರಿಯಾಗಿ ಎಂದು ಮಾಧುಸ್ವಾಮಿ ಹೇಳಿದಾಗ ಎಲ್ಇಡಿ ಪರದೆ ಮುಂದೆ ನಿಂತಿದ್ದ ನೂರಾರು ಅಭಿಮಾನಿಗಳು ಶಿಳ್ಳೆ, ಕೇಕೆ ಹಾಕಿದರು. ತಕ್ಷಣ ಸರಿಪಡಿಸಿಕೊಂಡು ಮಂತ್ರಿಯಾಗಿ ಎಂದ ಮಾಧುಸ್ವಾಮಿಗೆ ಜನರಿಂದ ನಗೆಯ ಪ್ರತಿಕ್ರಿಯೆ ದೊಡ್ಡಮಟ್ಟದಲ್ಲಿ ಲಭಿಸಿತು. ಈ ಸಂದರ್ಭ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಖ ತೋರಿಸದ ಸಂದರ್ಭದಲ್ಲಿಯೂ ಜನ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.

ಅತ್ಯಂತ ಪ್ರಮುಖವಾಗಿ ಮಾಧುಸ್ವಾಮಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಆಗಮಿಸಿದ ಸಂದರ್ಭ ಸಾರ್ವಜನಿಕರಿಂದ ಹೆಚ್ಚಿನ ಹರ್ಷ ವ್ಯಕ್ತವಾಯಿತು. ಇನ್ನು ಇದನ್ನು ಹೊರತುಪಡಿಸಿದರೆ ಬಿ. ಶ್ರೀರಾಮುಲು ಹಾಗೂ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬಂದಾಗ ಜನರ ಹರ್ಷ ಹೆಚ್ಚಾಗಿ ಕೇಳಿಬಂತು.

ಜನ ನೂತನ ಸಚಿವರಿಗೆ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಪರವಾಗಿ ಘೋಷಣೆ ಕೂಗಿ ಜೈಕಾರ ಮೊಳಗಿಸಿದರು. ಪಕ್ಷದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದಲೇ ರಾಜಭವನದ ಪಾದಚಾರಿ ಮಾರ್ಗ ತುಂಬಿತ್ತು. ಹಲವರು ತಮ್ಮ ನೆಚ್ಚಿನ ಸಚಿವರಿಗೆ ಹೂಗುಚ್ಛ ನೀಡುವ ಸಲುವಾಗಿ ಬೊಕ್ಕೆ ಹಿಡಿದು ಆಗಮಿಸಿದ್ದರು. ಕೆಲವರು ಹೂವಿನ ಹಾರವನ್ನು ಹಿಡಿದು ಬಂದಿದ್ದರು. ಶ್ರೀರಾಮುಲು ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಸಚಿವರು ರಾಜಭವನದ ಆಚೆ ನಡೆದು ಬಂದು ಅಭಿಮಾನಿಗಳ ಜೊತೆ ತಮ್ಮ ಸಂತಸವನ್ನು ಹಂಚಿಕೊಳ್ಳಲಿಲ್ಲ.

ಇನ್ನು ನೂತನ ಸಚಿವರೆಲ್ಲರೂ ತಮಗೆ ನೀಡಿದ ಹೊಸ ಕಾರುಗಳಲ್ಲಿ ವಿಧಾನಸೌಧಕ್ಕೆ ತೆರಳಿದರು. ಹಲವು ಸಚಿವರ ಕುಟುಂಬ ಸದಸ್ಯರು ಮಾತ್ರ ಆಚೆ ಬಂದು ತಮ್ಮ ಖಾಸಗಿ ವಾಹನಗಳ ಮೂಲಕ ತೆರಳಿದ್ದು ಕಂಡುಬಂತು.

ABOUT THE AUTHOR

...view details