ಬೆಂಗಳೂರು :ಮಲ್ಲೇಶ್ವರದ ಹೃದಯಭಾಗದಲ್ಲಿರುವ ನ್ಯೂ ಕೃಷ್ಣ ಭವನ ಡಿಸೆಂಬರ್ 6 ರಂದು ಮುಚ್ಚುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 7 ದಶಕಗಳಿಂದ ಅಪ್ರತಿಮ ಪಾಕಶಾಲೆಯಾಗಿದ್ದ ಈ ಆಸ್ತಿಯನ್ನು ಹೆಸರಾಂತ ಆಭರಣ ಸರಪಳಿಗೆ ಮಾರಾಟ ಮಾಡಲಾಗಿದ್ದು, ಹೋಟೆಲ್ ಮುಚ್ಚಿ ವಾಣಿಜ್ಯ ಕಟ್ಟಡಕ್ಕೆ ದಾರಿ ಮಾಡಿಕೊಡಲಿದೆ.
1954ರಲ್ಲಿ ಗೋಪಿನಾಥ್ ಪ್ರಭು ಪ್ರಾರಂಭಿಸಿದ್ದ ನ್ಯೂ ಕೃಷ್ಣ ಭವನವು ತಲೆಮಾರುಗಳಿಂದ ಭೋಜನ ಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು, ಪ್ರಸಿದ್ಧ ಬಟನ್ ಇಡ್ಲಿ, ಮಂಗಳೂರು ನೀರ್ ದೋಸೆ, ಗ್ರೀನ್ ಮಸಾಲಾ ಇಡ್ಲಿ, ಸೇಲಂ ಸಾಂಬಾರ್ ವಡಾ, ಉಡುಪಿ ಬನ್ಸ್ , ಮಂಡ್ಯ ರಾಗಿ ದೋಸೆ, ಓಪನ್ ಬಟರ್ ದೋಸೆ ಇಲ್ಲಿನ ವಿಶೇಷ ತಿಂಡಿ ತಿನಿಸುಗಳು ಎನ್ನಿಸಿಕೊಂಡಿದ್ದವು.
ನ್ಯೂ ಕೃಷ್ಣ ಭವನದ ಪರಂಪರೆ ಅದರ ರುಚಿಕರವಾದ ಪಾಕಪದ್ಧತಿ ಮತ್ತು ಅನನ್ಯ ವಾತಾವರಣದ ಜೊತೆಗೆ ಆರಂಭಿಕ ದಿನಗಳಲ್ಲಿ ಇಲ್ಲಿನ ವಸತಿಗೃಹ ರಾಜ್ಯದ ವಿವಿಧೆಡೆಗಳಿಂದ ವೈವಿಧ್ಯಮಯ ಜನರನ್ನು ಆಕರ್ಷಿಸಿತ್ತು. ಈ ಹೋಟೆಲ್ ಝೀರೋ ವೇಸ್ಟ್ ಪಾಲಿಸಿಯನ್ನು ಅಳವಡಿಸಿಕೊಂಡು ಆತಿಥ್ಯ ಉದ್ಯಮಕ್ಕೆ ಉಜ್ವಲ ಉದಾಹರಣೆಯಾಗಿ ಮಾರ್ಪಟ್ಟಿತ್ತು.
ರಾಗಿ ರೊಟ್ಟಿ, ನೀರ್ ದೋಸೆ ಮತ್ತು ಹಸಿರು ಇಡ್ಲಿಯಂತಹ ಖಾದ್ಯಗಳನ್ನು ಪರಿಚಯಿಸಿ ಹೊಸ ಪರಂಪರೆಯನ್ನು ಹೋಟೆಲ್ ಉದ್ಯಮದಲ್ಲಿ ಸೃಷ್ಟಿಸಿದರು ಎಂದು ವಿದ್ಯಾರ್ಥಿ ಭವನದ ಮಾಲೀಕ ಅರುಣ್ ಅಡಿಗ, ಪ್ರಭು ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು.