ಬೆಂಗಳೂರು: ಇತ್ತೀಚಿನ ರಾಜಕಾರಣಿಗಳಿಗೆ ಬದ್ಧತೆ ಇಲ್ಲ. ಭಾರತೀಯ ಜನತಾ ಪಕ್ಷದವರಿಗೆ ಯಾವುದೇ ಸಿದ್ಧಾಂತ ಇಲ್ಲ. ಅಧಿಕಾರಕ್ಕಾಗಿ ಸತ್ಯವನ್ನು ಸುಳ್ಳು ಮಾಡ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಜವಾಹರ ಲಾಲ್ ನೆಹರೂ ಜನ್ಮದಿನಾಚರಣೆ ಪ್ರಯುಕ್ತ ಜಯನಗರದ ಆರ್.ವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ನಮ್ಮ ದೇಶಕ್ಕೆ ಒಪ್ಪಿಗೆ ಆಗದ ವಿಚಾರಗಳನ್ನ ಹೇಳೋದು ಜಾಸ್ತಿ. ಒಬ್ಬನೇ ಒಬ್ಬ ಬಿಜೆಪಿ ನಾಯಕ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಲಿಲ್ಲ. ವಲ್ಲಭಭಾಯ್ ಪಟೇಲ್ ಕಾಂಗ್ರೆಸ್ ಕಟ್ಟಾಳು. ಈಗ ಅವರನ್ನು ಬಳಸಿಕೊಂಡು ನೆಹರೂ ವಿರುದ್ಧ ಪ್ರೊಜೆಕ್ಟ್ ಮಾಡುವ ಕೆಲಸ ನಡೆಯುತ್ತಿದೆ. ಬಿಜೆಪಿ ಅವರು ನೆಹರೂ ಅವರನ್ನು ಮರೆಯಬಾರದು. ಆರ್ಎಸ್ಎಸ್ ಮತ್ತು ಹಿಂದೂ ಮಹಸಭಾ ಬ್ಯಾನ್ ಆಗಿತ್ತು. ಮರು ಕಟ್ಟಲು ಅವಕಾಶ ಕೇಳಿದಾಗ ನೆಹರೂ ಅವಕಾಶ ಕೊಟ್ರು ಎಂದರು.
ಮೋದಿಗೆ ಸ್ವಾತಂತ್ರ್ಯದ ಕಲ್ಪನೆ ಇಲ್ಲ:
ನರೇಂದ್ರ ಮೋದಿಗೆ ಸ್ವಾತಂತ್ರ್ಯದ ಕಲ್ಪನೆಯೇ ಗೊತ್ತಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿರಲಿಲ್ಲ. ಮೋದಿಗೆ ಅವರ ಮಹತ್ವ ಗೊತ್ತಿಲ್ಲ. ಡೋನಾಲ್ಡ್ ಟ್ರಂಪ್ಗೆ ಜ್ಞಾನದ ಕೊರತೆ ಇದೆ. ಫಾದರ್ ಆಫ್ ದಿ ನೇಷನ್ ಇರೋದು ಒಬ್ಬರೇ, ಅದು ಗಾಂಧಿ. ಮೋದಿ ಅಂತ ಹೇಳಿದಾಗ ಅಲ್ಲಿಯೇ ಪ್ರತಿಭಟನೆ ಮಾಡಬೇಕಿತ್ತು ಎಂದರು. ಈ ವೇಳೆ ಸಭಿಕರು ಮೋದಿ ಅವರ ಅಣ್ಣ ಟ್ರಂಪ್ ಅಂದಾಗ, ತಮ್ಮನೋ ಅಣ್ಣನೋ ಅದನ್ನು ಒಪ್ಪಿಕೊಂಡಿದ್ದು ಸರಿಯಲ್ಲ. ಹಲವರು ಪ್ರಾಣ ತ್ಯಾಗ ಮಾಡಿ ಕಟ್ಟಿದ ದೇಶವನ್ನ ಹಾಳು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ನಾಶ ಮಾಡಲು ಬಿಜೆಪಿ ಹೊರಟಿದೆ ಎಂದು ದೂರಿದರು.
ದೇಶದ ಪ್ರಜಾಪ್ರಭುತ್ವ ಬುಡಮೇಲು ಮಾಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಪ್ರಜಾಪ್ರಭುತ್ವದ ಮೊದಲ ವಿರೋಧಿ ನರೇಂದ್ರ ಮೋದಿ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ. ಜನರಿಗೆ ಇಂತಹ ಭಾವನೆಗಳನ್ನ ತುಂಬಲು ಮುಂದೆ ಬರಬೇಡಿ. ನೆಹರೂ ಮತ್ತು ಗಾಂಧಿ ನಿಮ್ಮ ರೀತಿ ಅಂದುಕೊಂಡಿದ್ರೆ ಅಂದು ವಿರೋಧ ಪಕ್ಷವೇ ಇರ್ತಿರಲಿಲ್ಲ. ಅವರು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯಿಂದ ವಿರೋಧ ಪಕ್ಷ ಇರಬೇಕು ಅಂದುಕೊಂಡ್ರು. ವಿರೋಧ ಪಕ್ಷ ಇದ್ರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದರು.