ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ

ರಾಜ್ಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಆಚರಿಸಲಾಯಿತು.

Stomach worm Control Day

By

Published : Sep 26, 2019, 6:00 AM IST

ಬೆಂಗಳೂರು/ಧಾರವಾಡ/ಶಿವಮೊಗ್ಗ/ಮಂಗಳೂರು: ರಾಜ್ಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಆಚರಿಸಲಾಯಿತು.

ಇದರ ಅಂಗವಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ಹೊಂಬೇಗೌಡನಗರ ವಾರ್ಡ್​ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮಕ್ಕೆ ಮೇಯರ್ ಗಂಗಾಂಬಿಕೆ ಚಾಲನೆ ನೀಡಿದರು.

ರಾಜ್ಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್ ಗಂಗಾಂಬಿಕೆ, ಪಾಲಿಕೆ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಹಾಗೂ ಶಾಲೆಯಿಂದ ಹೊರಗುರುಳಿದ 1ರಿಂದ 19 ವರ್ಷದ ಸುಮಾರು 10 ಲಕ್ಷ ಮಕ್ಕಳಿದ್ದಾರೆ.‌ ಈ ಎಲ್ಲಾ ಮಕ್ಕಳು ಜಂತು ಹುಳು ನಿವಾರಣೆ ಮಾತ್ರೆ ಸೇವಿಸಬೇಕು. ಜಂತು ಹುಳುಗಳು ನಾವು ತಿನ್ನುವ ಆಹಾರದಲ್ಲಿನ ಪೌಷ್ಟಿಕಾಂಶವನ್ನು ಸೇವಿಸುತ್ತವೆ. ಇದರಿಂದ ಮಿದುಳಿನ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೇ ಮಕ್ಕಳಲ್ಲಿನ ಏಕಾಗ್ರತೆಯನ್ನು ಕುಗ್ಗಿಸುತ್ತವೆ. ಜಂತು ಹುಳು ನಿರ್ಮೂಲನೆಗೆ ಮಾತ್ರೆ ಸೇವಿಸುವುದು ಮಾತ್ರವಲ್ಲದೆ, ಊಟ ಮಾಡುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಇನ್ನು ಧಾರವಾಡದ ಎಂ​ವಿಎಎಸ್ ಮಲ್ಲಸಜ್ಜನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್​ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕಲುಷಿತ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳದ ಮಕ್ಕಳಲ್ಲಿ ಕಲುಷಿತ ಮಣ್ಣಿನ ಮೂಲಕ ಮತ್ತು ಜಂತು ಬಾಧೆಯುಳ್ಳ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಜಂತುಹುಳು ಪ್ರಸಾರವಾಗುತ್ತದೆ. ಮೇಲಿಂದ ಮೇಲೆ ಮಕ್ಕಳಲ್ಲಿ ಜಂತುಬಾಧೆ ಕಾಣಿಸಿಕೊಳ್ಳುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಕ್ಕಳಲ್ಲಿ ಶೈಕ್ಷಣಿಕ ಪಾಠದೊಂದಿಗೆ ವೈಯಕ್ತಿಕ ಸ್ವಚ್ಛತೆ, ತಿನ್ನುವ ಆಹಾರ, ಆಹಾರ ಸೇವಿಸುವ ಕ್ರಮ, ಕುಡಿಯುವ ನೀರು, ಶೌಚಾಲಯ ಬಳಕೆ, ಕೈ ತೊಳೆಯುವ ಕ್ರಮ, ಪರಿಸರ ಸ್ವಚ್ಛತೆ ಕುರಿತು ತಿಳುವಳಿಕೆ ನೀಡಿ, ಪಾಲಿಸುವಂತೆ ನೋಡಿಕೊಳ್ಳಬೇಕು ಎಂದರು.

ಶಿವಮೊಗ್ಗ ಕರಾವಳಿಯಲ್ಲೂ ಜಂತು ಹುಳು ನಿವಾರಣಾ ದಿನಾಚರಣೆ:

ಇನ್ನು ಶಿವಮೊಗ್ಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶ್ರೀ ಚನ್ನಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬೆಕ್ಕಿನಕಲ್ಮಠದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗೀಹಳ್ಳಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜಂತುಹುಳು ನಾಶಕ ಮಾತ್ರವಲ್ಲದೆ, ಶುದ್ಧ ಆಹಾರ, ನೀರು ಹಾಗೂ ಆಹಾರ ಸೇವನೆ ವೇಳೆ ಕೈಯನ್ನು ಶುಭ್ರವಾಗಿ ತೊಳೆಯುವುದು. ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಕಡ್ಡಾಯವಾಗಿ ಶೌಚಾಲಯ ಬಳಕೆ, ಬರಿಗಾಲಿನಲ್ಲಿ ನಡೆಯದಿರುವುದು. ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಜಂತು ಹುಳುಗಳಿಂದ ಉಂಟಾಗುವ ಅನಾರೋಗ್ಯವನ್ನು ನಿಯಂತ್ರಿಸಬಹುದಾಗಿದೆ ಎಂದರು.

ಇನ್ನು ಮಂಗಳೂರಿನಲ್ಲಿ ನಗರದ ರಥಬೀದಿ ಹೆಣ್ಣುಮಕ್ಕಳ ಕಾಲೇಜಿನಲ್ಲಿ ರಾಷ್ಟ್ರೀಯ ಜಂತುಹುಳ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ದ.ಕ. ಜಿಪಂ ಸಿಇಒ ಡಾ. ಆರ್.ಸೆಲ್ವಮಣಿ ಮಾತನಾಡಿ, ಜಂತು ಹುಳ ನಿವಾರಣಾ ಮಾತ್ರೆಯನ್ನು 19 ವರ್ಷ ವಯಸ್ಸಿನ ಮಕ್ಕಳೂ ಕೂಡಾ ಅವಶ್ಯಕವಾಗಿ ಸೇವನೆ ಮಾಡಬೇಕು ಎಂದರು.

ABOUT THE AUTHOR

...view details