ಕರ್ನಾಟಕ

karnataka

By

Published : Nov 23, 2021, 8:45 PM IST

ETV Bharat / state

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ: ನವೆಂಬರ್ 29ಕ್ಕೆ ಮಹತ್ವದ ಸಭೆ

ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲೂಕಿನ ಲಕ್ಕವಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ನಾಲೆಯ ಮೂಲಕ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗೆ ನೀರು ಉಣಿಸಲಾಗುತ್ತದೆ.

bhadra-upper-project
ಭದ್ರಾ

ಬೆಂಗಳೂರು: ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಸ್ಥಾನಮಾನ ‌ನೀಡುವ ಸಂಬಂಧ ನ. 29ಕ್ಕೆ ಮಹತ್ವದ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಆ ಮೂಲಕ ಈ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನಕ್ಕಾಗಿ ಅಧಿಕೃತ ಮುದ್ರೆ ಬೀಳುವ ಹಾದಿ ಇನ್ನಷ್ಟು ಸುಗಮವಾಗಲಿದೆ.

ಕೇಂದ್ರ ಜಲಸಂಪನ್ಮೂಲ ಇಲಾಖೆ ಈ ಸಂಬಂಧ ರಾಜ್ಯ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದು, ಭದ್ರಾ‌ ಮೇಲ್ದಂಡೆ ಯೋಜನೆಯ ಈಗಿನ ಸ್ಥಿತಿಗತಿ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚಿಸಿದೆ. ಉನ್ನತ ಮಟ್ಟದ ಸಮಿತಿಯ 13ನೇ ಸಭೆಯ ಅಜೆಂಡಾದಲ್ಲಿ 'ರಾಷ್ಟ್ರೀಯ ಯೋಜನೆಯಡಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆ ಸೇರ್ಪಡೆ ಪರಿಗಣಿಸುವಿಕೆ' ಎಂಬ ವಿಷಯವನ್ನು ಸೇರಿಸಲಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡುವಂತೆ ಕೋರಿ ಸಿಎಂ ಬೊಮ್ಮಾಯಿ, ಅಧಿಕಾರಿಗಳು ಕೇಂದ್ರ ಸಚಿವರು ಹಾಗೂ ಅಧಿಕಾರಿಗಳನ್ನು ಮೂರು ಬಾರಿ ಭೇಟಿಯಾಗಿದ್ದಾರೆ. 2010ರಿಂದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನಕ್ಕಾಗಿ ಒತ್ತಾಯ ಮಾಡುತ್ತಲೇ ಬರುತ್ತಿದೆ. ಇದೀಗ ಅಂತಿಮ ಹಂತಕ್ಕೆ ಬರುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಜಲ ಆಯೋಗ ರಾಷ್ಟ್ರೀಯ ಸ್ಥಾನಮಾನ ಸಂಬಂಧ ಕಳೆದ ವರ್ಷ ತಾತ್ವಿಕ ಒಪ್ಪಿಗೆ ನೀಡಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 21,473.67 ಕೋಟಿ ರೂ. ಮೊತ್ತದ ಸಮಗ್ರ ಪರಿಷ್ಕೃತ ಯೋಜನಾ ವರದಿಯ ಶಿಫಾರಸ್ಸಿನ ಅನ್ವಯ ಸರ್ಕಾರ ಡಿ.16, 2020 ರಂದು ಆರ್ಥಿಕ ಇಲಾಖೆ ಸಹಮತಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಇಲಾಖೆ ತಿಳಿಸಿದೆ.

ಡಿ. 24, 2020 ರಂದು ನಡೆದ ಕೇಂದ್ರ ಜಲಶಕ್ತಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಯೋಜನೆಗೆ 16125.48 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಡಿ. 2, 2020ರಲ್ಲಿ ನಡೆದ ನಿರ್ದೇಶಕ ಮಂಡಳಿಯ 16ನೇ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿದ್ದು, ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಅನುಮೋದಿತವಾಗಿದೆ.

ಈ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯಡಿ 16,125.4 ಕೋಟಿ ರೂ. ಗಳನ್ನು ಭರಿಸಲಿದೆ. ಈ ಯೋಜನೆಯನ್ನು 2023-24 ರೊಳಗೆ ಪೂರ್ಣಗೊಳಿಸುವ ಷರತ್ತಿನೊಂದಿಗೆ ಕೇಂದ್ರ ಸರ್ಕಾರ ಅನುದಾನ ಮಂಜೂರು ಮಾಡಲಿದೆ.

ಏನಿದು ಭದ್ರಾ ಮೇಲ್ದಂಡೆ ಯೋಜನೆ?

ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲೂಕಿನ ಲಕ್ಕವಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ನಾಲೆಯ ಮೂಲಕ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗೆ ನೀರು ಉಣಿಸುವುದು ಯೋಜನೆಯಾಗಿದೆ.

ಹನಿ ನೀರಾವರಿ ಮೂಲಕ ನೀರು ಒದಗಿಸುವ ರಾಜ್ಯದ ಬಹುದೊಡ್ಡ ನೀರಾವರಿ ಯೋಜನೆ ಇದಾಗಿದೆ. ಯಾವುದೇ ಅಣೆಕಟ್ಟು ನಿರ್ಮಿಸದೆ ಭಾರಿ ಪ್ರಮಾಣದ ನೀರು ಹಂಚಿಕೆ ಮಾಡಿ ರೂಪಿಸಿದ ಯೋಜನೆ ಇದಾಗಿದೆ.

ಕೇಂದ್ರ ಹೂಡಿಕೆ ಸಮಿತಿಯು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿ ಅನುಮೋದಿಸಿದೆ. ರಾಷ್ಟ್ರೀಯ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆ ಎಂಬ ಹೆಗ್ಗಳಿಕೆಗೆ ಈ ಭದ್ರಾ ಮೇಲ್ದಂಡೆ ಯೋಜನೆ ಪಾತ್ರವಾಗಿದೆ. ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗೆ ಅನುಕೂಲವಾಗಲಿದೆ. ಯೋಜನೆಗೆ 22,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 16,125 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ 2.25 ಲಕ್ಷ ಹೆಕ್ಟೇರ್‌ ನೀರಾವರಿ ಮಾಡಲು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರೀಯ ಯೋಜನೆ ಘೋಷಣೆಯಾದ ಹಿನ್ನಲೆ 2018-19ನೇ ಸಾಲಿನ ನಂತರದ ವೆಚ್ಚವನ್ನೂ ಕೇಂದ್ರವೇ ನೀಡಲಿದೆ.

ಹನಿ ನೀರಾವರಿಯ ಲ್ಯಾಟ್ರಲ್‌ಗಾಗಿ ಆಗುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಚಿಕ್ಕಮಗಳೂರು, ಬಯಲುಸೀಮೆಯ ಚಿತ್ರದುರ್ಗ, ತುಮಕೂರು ಜಿಲ್ಲೆಗಳ 357 ಕೆರೆಗಳಿಗೆ ಶೇ.50 ರಷ್ಟು ನೀರು ತುಂಬಿಸುವುದರ ಜತೆಗೆ ಹನಿ ನೀರಾವರಿ ಮೂಲಕ 2.25 ಲಕ್ಷ ಹೆಕ್ಟೇರ್‌ಗೆ ಹನಿ ನೀರಾವರಿ ಸೌಲಭ್ಯ ಸಿಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದ 17.4 ಟಿಎಂಸಿ, ಭದ್ರಾ ಜಲಾಶಯದಿಂದ 12.5 ಟಿಎಂಸಿ ಸೇರಿ ಒಟ್ಟು 29.9 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ:ಜಲಾವೃತವಾದ ಬೆಂಗಳೂರು ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್.. 3 ಸಾವಿರಕ್ಕೂ ಹೆಚ್ಚು ನಿವಾಸಿಗಳಿಗೆ 3 ದಿನದಿಂದ ನರಕಯಾತನೆ

ABOUT THE AUTHOR

...view details