ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಬಣ್ಣದ ಬಹು ನಿರೀಕ್ಷಿತ ಕೆ ಆರ್ ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳು ಸೋಮವಾರದಿಂದ ಸಂಚಾರ ಆರಂಭಿಸಲಿವೆ ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಸರ್ಕಾರದ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ನಾಳೆಯಿಂದ ಸೇವೆಗಳನ್ನು ಆರಂಭಿಸುವಂತೆ ಬಿ.ಎಂ.ಆರ್.ಸಿ.ಎಲ್ ಗೆ ಸೂಚನೆ ನೀಡಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಕೆ.ಆರ್.ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವನ್ನು ಪ್ರಾರಂಭಿಸಲು ಸರ್ಕಾರ ನಿರಂತರ ವಿಳಂಬ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋ ಬಳಸುತ್ತಾರೆ. ಬೈಯಪ್ಪನಹಳ್ಳಿ-ಕೆ ಆರ್. ಪುರ ಮೆಟ್ರೋ ಮಾರ್ಗವನ್ನು ತೆರೆದರೆ ಸುಮಾರು 50-60 ಪ್ರತಿಶತದಷ್ಟು ಜನರಿಗೆ ಅನುಕೂಲವಾಗಲಿದೆ ಎಂದಿದ್ದರು.
ಕೇಂದ್ರ ಸರ್ಕಾರ ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ಪೂರ್ವ-ಪಶ್ಚಿಮ ಕಾರಿಡಾರ್‌ನ ವಿಭಾಗಗಳಾದ ಬೈಯಪ್ಪನಹಳ್ಳಿ - ಕೆರ್ ಪುರ (2.1 ಕಿಮೀ) ಮತ್ತು ಚಲ್ಲಘಟ್ಟ - ಕೆಂಗೇರಿ (2.05 ಕಿಮೀ) ನಡುವೆ ಎರಡು ರೈಲ್ವೆೆ ಮಾರ್ಗಗಳಲ್ಲಿ ವಾಣಿಜ್ಯ ಸೇವೆ ಆರಂಭಿಸಿ, ಪ್ರಯಾಣಿಕರ ಕಾರ್ಯಾಚರಣೆ ಮಾಡುವಂತೆ ಮಂಜೂರು ಮಾಡಿದೆ.
ಸೆ. 25 ಮತ್ತು ಸೆ. 30 ಮೆಟ್ರೋ ರೈಲು ಸುರಕ್ಷತೆ ಆಯುಕ್ತರಿಂದ ಸುರಕ್ಷತಾ ಪರೀಕ್ಷೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ, ಮೇಲಿನ ಎರಡು ರೈಲ್ವೆ ಮಾರ್ಗಗಳನ್ನು ಔಪಚಾರಿಕವಾಗಿ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುವುದಕ್ಕೆೆ ಅನುಮತಿ ನೀಡಲಾಗಿದೆ.