ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೃಢಪಡಿಸಿದ್ದಾರೆ. ಬಿಟಿಎಂ ಲೇಔಟ್ನಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷದಲ್ಲಿ ಅಶಿಸ್ತಿನ ಕಾರಣಕ್ಕೆ ಯತ್ನಾಳ್‌ಗೆ ನೋಟಿಸ್ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಮುಂದೆ ಬರುವಂತೆ ಸೂಚಿಸಿದೆ. ಶಿಸ್ತು ಸಮಿತಿ ಅವರ ಮೇಲೆ ಕ್ರಮ ಕೈಗೊಳ್ಳಲಿದೆ ಎಂದರು.
ಇತ್ತ ಬಸನಗೌಡ ಯತ್ನಾಳ್ ತಮಗೆ ನೋಟಿಸ್ ನೀಡಿರುವುದನ್ನು ನಿರಾಕರಿಸುತ್ತಾ ಬಂದಿದ್ದರು. ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆಯಾ ಇಲ್ಲವೋ ಎಂಬ ಗೊಂದಲ ಉಂಟಾಗಿತ್ತು. ಇದೀಗ ನಳಿನ್ ಕುಮಾರ್ ಕಟೀಲ್ ನೋಟಿಸ್ ನೀಡಿರುವ ಬಗ್ಗೆ ಖಚಿತಪಡಿಸಿದ್ದು, ಅವರು ಶಿಸ್ತು ಸಮಿತಿ ಮುಂದೆ ಹಾಜರಾಗಲು ಸೂಚಿಸಲಾಗಿದೆ. ಯತ್ನಾಳ್ ವಿರುದ್ಧ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಯತ್ನಾಳ್ ಪಕ್ಷದ ವಿರುದ್ಧ ಹಾಗೂ ತಮ್ಮದೇ ಸಚಿವರ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಕಾರಣ ಕೇಳಿ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಯತ್ನಾಳ್ ಸಚಿವ ಮುರುಗೇಶ್ ನಿರಾಣಿ ವಿರುದ್ದ 'ಪಿಂಪ್' ಪದ ಬಳಸಿದ್ದಲ್ಲದೇ ಮೀಸಲಾತಿ ಸಂಬಂಧ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಈ ಸಂಬಂಧ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ.
ಈ ಹಿಂದಿನಿಂದಲೂ ಒಂದಲ್ಲಾ ಒಂದು ಹೇಳಿಕೆ ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ವಲಯದಿಂದ ಒತ್ತಾಯ ಕೇಳಿ ಬರುತ್ತಲೇ ಇತ್ತು. ಆದರೆ, ಕೇಂದ್ರ ನಾಯಕರಿಂದ ಯತ್ನಾಳ್‌ಗೆ ಯಾವುದೇ ಖಡಕ್ ವಾರ್ನಿಂಗ್ ನೀಡಿರಲಿಲ್ಲ. ಈ ಬಾರಿ ಶಿಸ್ತು ಸಮಿತಿ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳುತ್ತದೆಯೇ? ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ:ಮೀಸಲಾತಿ ಹೋರಾಟ: ಯತ್ನಾಳ್ ಅಬ್ಬರಕ್ಕೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಎಂಟ್ರಿ
ಕಾಂಗ್ರೆಸ್ ವಿರೋಧ ಪಕ್ಷವಾಗಿರಲು ನಾಲಾಯಕ್: ಕಾಂಗ್ರೆಸ್ ದೇಶದಲ್ಲಿ ವಿರೋಧ ಪಕ್ಷವಾಗಿ ಇರಲು ಲಾಯಕ್ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯವರನ್ನು ಜೈಲಿಗೆ ಕಳಿಸುತ್ತೇನೆ ಎಂದಿದ್ದ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂದಿರಾಗಾಂಧಿ ನಮ್ಮ ಪಕ್ಷವನ್ನು ಮುಗಿಸಲು ಹೊರಟಿದ್ದರು. ಅಂದು ಯಾರೆಲ್ಲಾ ದ್ವೇಷ ಕಾರಿದ್ದಾರೋ, ಅವರ್ಯಾರೂ ಇಂದು ಉಳಿದಿಲ್ಲ. ಇಂದಿರಾಗಾಂಧಿ ಅವರೇ ನಮ್ಮನ್ನು ಜೈಲಿಗೆ ದೂಡಲು ಯತ್ನಿಸಿದ್ದರು. ಈ ಕೆಲಸ ಯಾರ ಕೈಯಲ್ಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಎರಡು ಪಕ್ಷಗಳನ್ನು ಚಪ್ಪಲಿಗೆ ಹೋಲಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಯಾವುದೇ ಪಕ್ಷಗಳ ಹೆಸರನ್ನು ಹೇಳಿಲ್ಲ. ನನಗೆ ದೇವೇಗೌಡರ ಮೇಲೆ ಅಪಾರ ಗೌರವವಿದೆ. ಈ ರಾಜ್ಯದಲ್ಲಿ ಮೂರು ಪಕ್ಷಗಳಿವೆ. ಎರಡು ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಹಾಗಾಗಿ ಈ ವಿಚಾರ ಪ್ರಸ್ತಾಪ ಮಾಡಿದೆ. ಆ ವಿಚಾರವನ್ನು ಅಲ್ಲಿಗೇ ಬಿಟ್ಟಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ:ಇಂದಿನಿಂದ ಬೂತ್ ವಿಜಯ ಸಂಕಲ್ಪ ಅಭಿಯಾನ ಆರಂಭವಾಗಿದ್ದು, ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಎನ್.ಆರ್ ರಮೇಶ್, ಗೋಪಿನಾಥ್ ರೆಡ್ಡಿ, ಅನಿಲ್ ಶೆಟ್ಟಿ, ರಾಜೇಂದ್ರ ರೆಡ್ಡಿ, ದೇವದಾಸ್ ಭಾಗಿಯಾಗಿದ್ದರು. ಬಳಿಕ ಕಟೀಲ್ ಜಯನಗರದ ಆಂಜನೇಯ ಸ್ವಾಮಿ ದೇವಸ್ಥಾನ ಬೈರಸಂದ್ರದಲ್ಲಿ ನಡೆದ ಅಭಿಯಾನದಲ್ಲಿ ಭಾಗವಹಿಸಿದರು. ಇತ್ತ ಕರ್ನಾಟಕದ ಸಹ ಉಸ್ತುವಾರಿಗಳಾದ ಡಿ.ಕೆ. ಅರುಣಾ ಕುರುಬರಹಳ್ಳಿ ಡಾ. ರಾಜಕುಮಾರ್ ವೃತ್ತದ ಬಳಿ ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು.
ವಿಜಯಪುರದಲ್ಲಿ ಜೆಪಿ ನಡ್ಡಾರಿಂದ ಚಾಲನೆ:ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಒಂಬತ್ತು ದಿನಗಳ ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆಗೆ ಇಂದು ವಿಜಯಪುರದಿಂದ ಚಾಲನೆ ನೀಡಿದ್ದಾರೆ. ಇನ್ನು ನಾಲ್ಕು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ವಿಜಯಪುರದಿಂದ ಒಂಬತ್ತು ದಿನಗಳ ಜನಸಂಪರ್ಕ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದೆ. ವಿಜಯ ಸಂಕಲ್ಪ ಯಾತ್ರೆ ಜನವರಿ 29 ರವರೆಗೆ ನಡೆಯಲಿದೆ.
ಯಾತ್ರೆಯು ಮನೆ ಮನೆಗೆ ಪ್ರಚಾರ ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಒಳಗೊಂಡಿರುತ್ತದೆ ಮತ್ತು ಬೂತ್ ಮಟ್ಟದಲ್ಲಿ ಪಕ್ಷದ ನೆಲೆಯನ್ನು ಬಲಪಡಿಸುತ್ತದೆ. ವಿಜಯಪುರದಿಂದ ಆರಂಭವಾಗಲಿರುವ ಒಂಬತ್ತು ದಿನಗಳ ಕಾಲ ರಾಜ್ಯಾದ್ಯಂತ ನಡೆಯುವ ಕಾರ್ಯಕ್ರಮದಲ್ಲಿ ಒಂದು ಕೋಟಿಗೂ ಹೆಚ್ಚು ಹೊಸ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ.
ಇದನ್ನೂ ಓದಿ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ನಿಂದ ನೋಟಿಸ್