ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರ ಕೆಂಪಣ್ಣ ಮಾಡಿರುವ ಆರೋಪ ಆಧಾರರಹಿತವಾಗಿದ್ದು, ಅದಕ್ಕೆ ಮಹತ್ವ ಕೊಡಬೇಕಿಲ್ಲ. ಪ್ರತಿ ನಿತ್ಯ ಸಾವಿರಾರು ಪತ್ರ ಪ್ರಧಾನಿ ಕಚೇರಿಗೆ ಹೋಗುತ್ತದೆ. ಕರಿಯಣ್ಣ, ಬಿಳಿಯಣ್ಣ ಎಲ್ಲರ ಪತ್ರವೂ ಹೋಗುತ್ತದೆ ಹಾಗೆ ಕೆಂಪಣ್ಣನ ಪತ್ರವೂ ಹೋಗಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಂಪಣ್ಣ ಸಿದ್ದರಾಮಯ್ಯ ಮನೆಯಲ್ಲೇ ಸುದ್ದಿಗೋಷ್ಟಿನಡೆಸಿರುವುದರಿಂದ ಇದರ ಗಾಂಭೀರ್ಯತೆ ಎಷ್ಟಿದೆ ಅಂತಾ ಗೊತ್ತಾಗುತ್ತದೆ. ಹಿಂದಿನಂತೆಯೇ ತಳ ಬುಡ ಇಲ್ಲದ ಆರೋಪ ಮಾಡಿದ್ದಾರೆ. ಅವರು ದಾಖಲೆಗಳನ್ನು ಕೊಡಲು ಸಿದ್ಧವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇಲ್ಲ. ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಿಕೆಗಳ ಝೆರಾಕ್ಸ್ ಕಾಪಿ ಎಂದು ಜರಿದರು.
ಪ್ರತಿ ನಿತ್ಯ ಸಾವಿರಾರು ಪತ್ರಗಳು ಪ್ರಧಾನಿ ಅವರ ಕಚೇರಿಗೆ ಹೋಗುತ್ತವೆ. ಕರಿಯಣ್ಣ, ಬಿಳಿಯಣ್ಣ ಎಲ್ಲರ ಪತ್ರವೂ ಹೋಗುತ್ತದೆ. ಅದೇ ರೀತಿ ಕೆಂಪಣ್ಣನ ಪತ್ರವೂ ಹೋಗಲಿ. ಕೆಂಪಣ್ಣ ಆರೋಪಕ್ಕೆ ಗಂಭೀರತೆಯೇ ಉಳಿದಿಲ್ಲ. ನಮಗೆ ಮುಜುಗರದ ಪ್ರಶ್ನೆಯೇ ಇಲ್ಲ ನಮ್ಮಲ್ಲಿ ಪರ್ಸಂಟೇಜ್ ಇಲ್ಲ, ಅದು ಕಾಂಗ್ರೆಸ್ ನಲ್ಲಿ ಮಾತ್ರ ಇರೋದು ಎಂದು ರವಿಕುಮಾರ್ ತಿರುಗೇಟು ನೀಡಿದರು.