ಬೆಂಗಳೂರು: ಮಾಜಿ ಭೂಗತ ಪಾತಕಿ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಸಮಯದಲ್ಲಾದರೂ ಹೆಲ್ತ್ ಬುಲೆಟಿನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಮತ್ತೊಂದೆಡೆ ರೈ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅವರ ನಿಧನದ ಕುರಿತು ಸುಳ್ಳು ಸುದ್ದಿ, ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ಆಸ್ಪತ್ರೆಯು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಾಗಿ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಆಸ್ಪತ್ರೆ ಕಡೆ ಯಾರೂ ಬರಬಾರದು ಎಂದು ತಿಳಿಸಲಾಗಿದೆ. ಆಸ್ಪತ್ರೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಕೈಗೊಳ್ಳಲಾಗಿದೆ. ಸದ್ಯ ಕೊರೊನಾ ಸೋಂಕು ಇರುವ ಹಿನ್ನೆಲೆ ಜನ ಗುಂಪು ಸೇರಬೇಆರದು ಎಂದು ಪೊಲೀಸರು ತಿಳಿಸಿದ್ದಾರೆ.