ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಧರಂಸಿಂಗ್ ಸಂಬಂಧಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸಿದಾಗ ಅಪರಿಚಿತರು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಸಿದ್ಧಾರ್ಥ್ ದೇವೆಂದರ್(28) ಕೊಲೆಯಾದ ದುದೈರ್ವಿ. ದಾಸರಹಳ್ಳಿಯ ನಿವಾಸಿಯಾಗಿರುವ ಸಿದ್ಧಾರ್ಥ್ ತಂದೆ ಸಿ.ಆರ್. ದೇವೇಂದರ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕಳೆದ ಜನವರಿ 19 ರಂದು ಸ್ನೇಹಿತರನ್ನು ಭೇಟಿಯಾಗುವ ಸಲುವಾಗಿ ಸಿದ್ದಾರ್ಥ್ ಅಮೆರಿಕಾ ಪ್ರಯಾಣಕ್ಕೆ ಮುಂದಾಗಿದ್ದ. ಈತ ತಂದೆಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ನಂತರ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಅಮೆರಿಕಾಗೆ ಸಿದ್ಧಾರ್ಥ್ ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ತಂದೆ ದೇವೇಂದರ್, ಮಗ ಕಾಣೆಯಾಗಿದ್ದಾನೆ ಎಂದು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆಂಧ್ರಪ್ರದೇಶದ ನೆಲ್ಲೂರು ಅರಣ್ಯ ಪ್ರದೇಶದಲ್ಲಿ ಅಪರಿಚಿತರು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವ್ಯವಸ್ಥಿತವಾಗಿ ಸಿದ್ದಾರ್ಥ್ನನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಅಮೃತಹಳ್ಳಿ ಪೊಲೀಸರ ತಂಡ ನೆಲ್ಲೂರಿಗೆ ಪ್ರಯಾಣ ಬೆಳೆಸಿದೆ.