ಬೆಂಗಳೂರು:ಕಳೆದ ಐದು ವರ್ಷಗಳಿಂದ ನ್ಯಾಯಾಲಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಯನ್ನು ರಾಜಗೋಪಾಲನಗರ ಠಾಣಾ ಪೊಲೀಸರು, ಬೆರಳು ಮುದ್ರೆ ಪರಿಶೀಲನೆ (ಎಂ-ಸಿಸಿಟಿಎನ್‌ಎಸ್) ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮಂಡ್ಯ ಮೂಲದ ವಸಂತ್ ಬಂಧಿತ ಆರೋಪಿ.
ಇತ್ತೀಚೆಗೆ ಎಲ್ಲ ಪೊಲೀಸ್ ಠಾಣೆಗಳಿಗೂ ಎಂ-ಸಿಸಿಟಿಎನ್ ಮೊಬೈಲ್ ಆ್ಯಪ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಚಿಕ್ಕ ಬೆರಳು ಮುದ್ರೆ ಡಿವೈಸ್ಅನ್ನು ವಿತರಣೆ ಮಾಡಲಾಗಿತ್ತು. ಈ ಡಿವೈಸ್ ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಮೂಲಕ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಯನ್ನು ಪರಿಶೀಲಿಸಿದರೆ ಆ ವ್ಯಕ್ತಿಯು ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಆ ಮಾಹಿತಿ ತಿಳಿಯಬಹುದಾಗಿದೆ.
ಡಿ.5ರ ರಾತ್ರಿ ರಾಜಗೋಪಾಲನಗರ ಠಾಣೆಯ ಎಎಸ್‌ಐ ರವಿಕುಮಾರ್ ಮತ್ತು ಸಿಬ್ಬಂದಿ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದಾಗ ಯುರೋಫಾರಂ ಜಂಕ್ಷನ್‌ನಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ್ದರು. ಬಳಿಕ ಆತನನ್ನು ವಿಚಾರಣೆ ನಡೆಸಿ ಎಂ-ಸಿಸಿಟಿಎನ್‌ಎಸ್ ಮೊಬೈಲ್ ಆ್ಯಪ್ ಮೂಲಕ ಡಿವೈಸ್ ಬಳಸಿಕೊಂಡು ಆ ವ್ಯಕ್ತಿಯ ಬೆರಳು ಮುದ್ರೆಯನ್ನು ಪರಿಶೀಲಿಸಿದಾಗ ಆ ವ್ಯಕ್ತಿಗೆ ಅಪರಾಧ ಹಿನ್ನೆಲೆಯಿರುವುದು ದೃಢಪಟ್ಟಿದೆ. ನಂತರ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಆರೋಪಿಯು ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಆರೋಪಿ ಜೈಲಿ ಸೇರಿದ್ದ. ಬಳಿಕ ಜಾಮೀನಿನ ಮೇಲೆ ಹೊರಬಂದು 2017ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೆಲ ವರ್ಷಗಳಿಂದ ಬೆಂಗಳೂರಿನ ಲಗ್ಗೆರೆಯ ಭೈರವೇಶ್ವರನಗರದಲ್ಲಿ ವಾಸವಾಗಿದ್ದಕೊಂಡು ಆಟೋ ಚಾಲಕನಾಗಿ ವೃತ್ತಿ ಮಾಡುತ್ತಿದ್ದ. ನ್ಯಾಯಾಲಯವು ಈ ಆರೋಪಿಯ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿರುವುದರಿಂದ ಮುಂದಿನ ಕಾನೂನು ಕ್ರಮಕ್ಕಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ರಾಜಗೋಪಾಲನಗರ ಪೊಲೀಸರು ತಿಳಿಸಿದ್ದಾರೆ.
(ಓದಿ: ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ )