ಕರ್ನಾಟಕ

karnataka

ETV Bharat / state

ನಕಲಿ ವೋಟರ್ ಐಡಿ ಪ್ರಕರಣ: ವರದಿ ಸಲ್ಲಿಸಲು ಹೈಕೋರ್ಟ್​ಗೆ ಕಾಲಾವಕಾಶ ಕೋರಿದ ಸರ್ಕಾರ

ಮುನಿರತ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ನಗರದ ಎನ್.ಆನಂದ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

munirats
ಮುನಿರತ್ನ

By

Published : Dec 18, 2020, 4:54 PM IST

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ನಕಲಿ ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿರುವ ತನಿಖೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಮತ್ತಷ್ಟು ಕಾಲಾವಕಾಶ ನೀಡುವಂತೆ ಹೈಕೋರ್ಟ್​ಗೆ ಮನವಿ ಮಾಡಿದೆ.

ಮುನಿರತ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ನಗರದ ಎನ್.ಆನಂದ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಪೊಲೀಸರ ತನಿಖೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿದರು. ಮನವಿ ಪುರಸ್ಕರಿಸಿದ ಪೀಠ, 3 ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿತು.

ಓದಿ:"ನೆರವು" ಸಂಚಾರಿ ಪೊಲೀಸ್ ಕ್ಯಾಬಿನ್‍ ಉದ್ಘಾಟಿಸಿದ ಪಂತ್​, ಭಾಸ್ಕರ್ ರಾವ್

ಹಿಂದಿನ ವಿಚಾರಣೆ ವೇಳೆ, ಮುನಿರತ್ನ ವಿರುದ್ಧ ದಾಖಲಿಸಿರುವ ದೂರಿನ ಮೇರೆಗೆ ಜಾಲಹಳ್ಳಿ ಠಾಣೆ ಪೊಲೀಸರು ನಡೆಸಿರುವ ತನಿಖೆಯನ್ನು ಪರಿಶೀಲಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಅವರು ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಹಾಗೆಯೇ ತನಿಖೆ ನಡೆಸಬೇಕಿರುವ ಅಂಶಗಳನ್ನು ಗುರುತಿಸಬೇಕು. ಆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು.

ಪ್ರಕರಣದ ಹಿನ್ನೆಲೆ: 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಆರ್​ಆರ್ ನಗರ ವಿಧಾನಸಭಾ ಕ್ಷೇತ್ರದಿಂದ ಮುನಿರತ್ನ ಸ್ಪರ್ಧಿಸಿದ್ದರು. ಚುನಾವಣೆಗೂ ಮುನ್ನ ಕ್ಷೇತ್ರದ ವ್ಯಾಪ್ತಿಯ ಜಾಲಹಳ್ಳಿಯ ಬೆಂಬಲಿಗರ ಅಪಾರ್ಟ್​​​ಮೆಂಟ್​ನಲ್ಲಿ 9 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಹಾಗೂ ಮುನಿರತ್ನ ಸ್ಪರ್ಧಿಸಿದ್ದ ಪಕ್ಷದ ಕರಪತ್ರಗಳು ಪತ್ತೆಯಾಗಿದ್ದವು. ಈ ಸಂಬಂಧ ಚುನಾವಣಾ ಆಯೋಗ ಹಾಗೂ ಸ್ಥಳೀಯ ನಿವಾಸಿ ರಾಕೇಶ್ ಪ್ರತ್ಯೇಕವಾಗಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಜಾಲಹಳ್ಳಿ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು ಸಿಬಿಐ ತನಿಖೆಗೆ ಕೋರಿದ್ದಾರೆ.

ABOUT THE AUTHOR

...view details