ಬೆಂಗಳೂರು: ಕಾಂಗ್ರೆಸ್ ಪಕ್ಷ ನಿನ್ನೆಯಷ್ಟೇ ಘೋಷಿಸಿದ್ದ ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನು ದಿಢೀರ್ ಬದಲಿಸಿದೆ. ಐದನೇ ಪಟ್ಟಿಯಲ್ಲಿ ಹೊಸದಾಗಿ ಮೂವರ ಹೆಸರು ಪ್ರಕಟಿಸಿದ್ದ ಕಾಂಗ್ರೆಸ್, ಮುಳಬಾಗಿಲು ಕ್ಷೇತ್ರದಿಂದ ಡಾ. ಬಿ.ಸಿ ಮುದ್ದು ಗಂಗಾಧರ್ ಹೆಸರು ಪ್ರಕಟಿಸಿತ್ತು. ಆದರೆ, ಇಂದು ಆ ಹೆಸರು ಬದಲಿಸಿದ್ದು ಆದಿ ನಾರಾಯಣ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿ ಫಾರಂ ನೀಡಿದ್ದಾರೆ. ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಆದಿ ನಾರಾಯಣ ಅವರಿಗೆ ಬಿ ಫಾರಂ ನೀಡಲಾಗಿದೆ.
ಕೋಲಾರ ಕ್ಷೇತ್ರದ ಅಭ್ಯರ್ಥಿ ಹಾಗೂ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ಪಕ್ಷದ ಮೇಲೆ ಒತ್ತಡ ತಂದಿದ್ದರು. ಅಭ್ಯರ್ಥಿ ಬದಲಾಗಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆ ಅವರ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಕಡೆಯ ಕ್ಷಣದಲ್ಲಿ ಈ ಬದಲಾವಣೆ ಮಾಡಿದೆ ಎನ್ನಲಾಗುತ್ತಿದೆ.
ಎರಡನೇ ಬದಲಾವಣೆ: ಐದನೇ ಪಟ್ಟಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಲಾಗಿತ್ತು. ಮೊದಲು ಮೊಹಮ್ಮದ್ ಯೂಸುಫ್ ಸವಣೂರು ಅವರ ಹೆಸರನ್ನು ಘೋಷಿಸಲಾಗಿತ್ತು. ಆದರೆ, ಇವರ ಹೆಸರನ್ನು ಬದಲಿಸಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇಂದು ಮತ್ತೊಂದು ಬದಲಾವಣೆ ಮಾಡಿದ್ದು, ಮುಳಬಾಗಿಲಿನಿಂದ ನಿನ್ನೆ ಘೋಷಿತವಾಗಿದ್ದ ಡಾ. ಬಿ.ಸಿ. ಮುದ್ದು ಗಂಗಾಧರ್ ಬದಲು ಏಕಾಏಕಿ ಆದಿ ನಾರಾಯಣ ಅವರಿಗೆ ಟಿಕೆಟ್ ನೀಡಲಾಗಿದೆ.
ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನನಗೆ ಗೊತ್ತಿಲ್ಲಪ್ಪ. ಡಿ.ಕೆ ಶಿವಕುಮಾರ್, ಖರ್ಗೆ ಚರ್ಚೆ ಮಾಡಿದ್ದಾರೆ. ಬದಲಾವಣೆ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿ ಅರ್ಜಿ ವಜಾ ವಿಚಾರವಾಗಿ ಮಾತನಾಡಿ, ಇದು ಕೆಳಹಂತದ ಕೋರ್ಟ್ನಲ್ಲಿ ಆಗಿದೆ. ಹೈಕೋರ್ಟ್ಗೆ ಮೇಲ್ಮನವಿ ಹಾಕ್ತೀವಿ ಎಂದರು.