ಬೆಂಗಳೂರು:ಉಪಚುನಾವಣೆ ಫಲಿತಾಂಶದಿಂದ ಧೃತಿಗೆಡುವ ಅವಶ್ಯಕತೆ ಇಲ್ಲ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ ಎಂದು ಕಾರ್ಯಕರ್ತರಿಗೆ ಸಂಸದ ಡಿಕೆ ಸುರೇಶ್ ತಿಳಿಸಿದ್ದಾರೆ.
ಫಲಿತಾಂಶದಿಂದ ಧೃತಿಗೆಡಬೇಡಿ ಎಂದು ಕಾರ್ಯಕರ್ತರಿಗೆ ಡಿಕೆ ಸುರೇಶ್ ಕರೆ - by-election result
ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು ಮತದಾರರ ತೀರ್ಪನ್ನು ಕೈ ನಾಯಕರು ತಲೆಬಾಗಿದ್ದಾರೆ. ಉಪ ಚುನಾವಣೆಯ ಫಲಿತಾಂಶ ಕುರಿತು ಟ್ವೀಟ್ ಮಾಡಿರುವ ಸಂಸದ ಡಿಕೆ ಸುರೇಶ್ ಈ ಫಲಿತಾಂಶದಿಂದ ಧೃತಿಗೆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೊದಲಿಗೆ ರಾಜರಾಜೇಶ್ವರಿ ನಗರ ಉಪಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮತದಾರರ ತೀರ್ಪಿಗೆ ನಾವೆಲ್ಲ ತಲೆಬಾಗಲೇಬೇಕಿದೆ. ಈ ಫಲಿತಾಂಶದಿಂದ ಯಾವ ಕಾರ್ಯಕರ್ತರೂ ಧೃತಿಗೆಡುವ ಅವಶ್ಯಕತೆಯಿಲ್ಲ. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳೋಣ ಎಂದಿದ್ದಾರೆ.
ಈ ಫಲಿತಾಂಶವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದೊಡ್ಡ ಮಟ್ಟದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ. ಪಕ್ಷ ಸಂಘಟನೆಯ ಎಲ್ಲಾ ಸಂದರ್ಭಗಳಲ್ಲೂ ನಾನು ನಿಮ್ಮ ಜೊತೆಗಿರುತ್ತೇನೆ. ಉಪಚುನಾವಣೆಗೆ ಸಹಕರಿಸಿದ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.