ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ಮಾಡಿದ್ರು. ಇದು ಕೇವಲ ಕಣ್ಣೊರೆಸುವ ತಂತ್ರ ಅನ್ನೋದು ರಾಜ್ಯದ ಜನರಿಗೆ ಗೊತ್ತಾಗಿದೆ. ಕಳೆದ ಬಾರಿ ಅನೇಕ ಭರವಸೆಗಳನ್ನು ನೀಡಿದ್ರು. ಆ ಭರವಸೆಗಳೇ ಈವರೆಗೆ ಈಡೇರಿಲ್ಲ. ಅದಕ್ಕೆ ಜನರು ಮೇಲೆ ಹಾರಾಡಬೇಡಿ, ಕೆಳಕ್ಕೆ ಬನ್ನಿ ಅಂತಿದ್ದಾರೆ. ಆದರೆ ಸಿಎಂ ಹಾಗೂ ಕಂದಾಯ ಸಚಿವರು ವಸ್ತು ಸ್ಥಿತಿ ತಿಳಿದುಕೊಳ್ಳುವ ಸಣ್ಣ ಮಾನವೀಯತೆಯನ್ನೂ ತೋರಿಸಿಲ್ಲ ಎಂದು ಹರಿಹಾಯ್ದರು.
ಹಣ ಕೊಟ್ಟವರ ಮಾತು ಕೇಳುತ್ತಿದ್ದಾರೆ: ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅನ್ನೋ ತರ ನಡೆದುಕೊಳ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಯಾರಿಗೆಲ್ಲ ಹಣ ಪಾವತಿ ಮಾಡಿದ್ರೋ ಅಂಥವರ ಮಾತನ್ನು ಮಾತ್ರ ಸಿಎಂ ಉಳಿಸಿಕೊಳ್ತಿದ್ದಾರೆ. ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಆದರೆ ರೈತರು ಶ್ರಮಿಕರಿಗೆ ಕೊಟ್ಟ ಮಾತನ್ನು ಸಿಎಂ ಉಳಿಸಿಕೊಂಡಿಲ್ಲ. ಕೇಂದ್ರದಿಂದ ಬರಬೇಕಾದ ಜಿಎಸ್ಟಿ ಬಾಕಿ ಇದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್ ಅವರೇ ನಿಮಗೆ ತಾಕತ್ತಿಲ್ವ, ಏನು ಸಮಸ್ಯೆ, ಭಯನಾ? ಅದನ್ನಾದ್ರೂ ಜನರಿಗೆ ಹೇಳಿ. ನಿಮ್ಮ ಸಂಸದರ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿ ಎಂದು ಡಿ ಕೆ ಸುರೇಶ್ ಒತ್ತಾಯಿಸಿದರು.
ಸಾಲ ಮಾಡುವ ಅವಶ್ಯಕತೆ ಏನಿದೆ?: ಸಾಲ ಅಂದ್ರೆ ಅದು ರಾಜ್ಯದ ಜನರ ಮೇಲೆ ಹೊರ ಹಾಕೋದು? ಬಿಜೆಪಿ ಸಂಸದರು ರಾಜ್ಯದ ಹಿತಕ್ಕೋಸ್ಕರ ಕೆಲಸ ಮಾಡಿ. ಚುನಾವಣೆ ರಾಜಕೀಯ ಬಿಡಿ. ವಿಧಾನಸಭೆ, ಲೋಕಸಭೆ ಚುನಾವಣೆ ದೂರ ಇದೆ. ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ನಾನು ಯಾವುದೇ ನಿಯೋಗದ ಜೊತೆಗೂ ಸಹಕಾರ ನೀಡಲು ಸಿದ್ಧವಾಗಿದ್ದೇನೆ ಎಂದು ಹೇಳಿದರು.
ವಿಶ್ವನಾಥ್ ಹೇಳಿದ್ದು ಸರಿ ಇದೆ:ಟಿಪ್ಪು ಸುಲ್ತಾನ್ ಈ ನೆಲದ ಮಗ ಎಂಬ ವಿಶ್ವನಾಥ್ ಹೇಳಿಕೆ ಸತ್ಯ. ಯಡಿಯೂರಪ್ಪ ಕೂಡ ಈ ಮಾತು ಹೇಳಿದ್ದು ಸತ್ಯ. ಚುನಾವಣೆ ದೃಷ್ಟಿ ಇಟ್ಟುಕೊಂಡು ಇತಿಹಾಸ ಬದಲಾಯಿಸೋ ಕೆಲಸವನ್ನು ಬಿಜೆಪಿ ಮಾಡ್ತಿದೆ. ವಿಶ್ವನಾಥ್ ಹೇಳಿರೋ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದನ್ನೂ ಅಲ್ಲಗಳೆಯಲು ಆಗಲ್ಲ. ರಾಷ್ಟ್ರಪತಿಗಳು ಟಿಪ್ಪು ಹೊಗಳಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಇತಿಹಾಸ ತಿರುಚುವುದು, ಕುಮ್ಮಕ್ಕು ಕೊಡುವುದು, ಜನರ ಭಾವನೆ ಬೇರೆಡೆ ಸೆಳೆಯುವ ಕೆಲಸ ಆಗ್ತಿದೆ. ಟಿಪ್ಪು ಕೂಡ ಈ ದೇಶಕ್ಕೆ, ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಆಚರಣೆಗಳೂ ಕೂಡ ಮುಂದುವರೆಯಬೇಕು ಎಂದು ಸಂಸದ ಡಿ ಕೆ ಸುರೇಶ್ ಆಗ್ರಹಿಸಿದರು.