ಬೆಂಗಳೂರು: ಅತಿವೃಷ್ಟಿಯು ರಾಜ್ಯದಲ್ಲಿ 2.18 ಲಕ್ಷ ಜನರನ್ನ ನಿರಾಶ್ರಿತರನ್ನಾಗಿ ಮಾಡಿದೆ. ತೀವ್ರ ಸ್ವರೂಪದ ಮಳೆ ಹಾಗೂ ಪ್ರವಾಹದಿಂದ ಲಕ್ಷಾಂತರ ಜನರ ಬದುಕು ದುಸ್ತರವಾಗಿದೆ. ಸರ್ಕಾರ ಆರಂಭಿಸಿರುವ ಪರಿಹಾರ ಕೇಂದ್ರಗಳಲ್ಲಿ ದಿನ ಕಳೆಯುವ ವಾತಾವರಣ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರ ನಿರಾಶ್ರಿತರಿಗಾಗಿ 17 ಜಿಲ್ಲೆಗಳಲ್ಲಿ 924 ಪರಿಹಾರ ಕೇಂದ್ರಗಳನ್ನು ಆರಂಭಿಸಿದ್ದು, ಊಟ- ವಸತಿ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಬೆಳಗಾವಿ, ಬಾಗಲಕೋಟೆ, ಗದಗ, ರಾಯಚೂರು, ಉತ್ತರ ಕನ್ನಡ, ಹಾವೇರಿ ಸೇರಿದಂತೆ 17 ಜಿಲ್ಲೆಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ 3.14 ಲಕ್ಷ ಜನರನ್ನ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳ, ಎಸ್ಡಿಆರ್ಎಫ್ ಎನ್ಡಿಆರ್ಎಫ್ ಮತ್ತು ಸೇನೆಯ ತಂಡಗಳು ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಾಂತರ ಜನರನ್ನು ಇಲ್ಲಿಯವರೆಗೆ ಸಂರಕ್ಷಿಸಿ, ಸುರಕ್ಷಿತ ಜಾಗಕ್ಕೆ ತಲುಪಿಸುವಲ್ಲಿ ಶ್ರಮವಹಿಸಿವೆ.