ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಅಪಾರ್ಟ್ಮೆಂಟ್ಗಳಲ್ಲಿ ಕೋವಿಡ್ ಸೋಂಕಿತರ ಹೆಚ್ಚಾಗಿ ಕಂಡು ಬರುತ್ತಿದ್ದು, ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಕ್ಷಣದ ಕ್ರಮಕೈಗೊಳ್ಳುತ್ತಿದ್ದಾರೆ.
ಕೋವಿಡ್ ಹಾಟ್ಸ್ಪಾಟ್ಗಳಾದ ಅಪಾರ್ಟ್ಮೆಂಟ್ಗಳು: ಬಿಬಿಎಂಪಿ ಹೈ ಅಲರ್ಟ್
ರಾಜಧಾನಿಯಲ್ಲಿ ಹೆಚ್ಚಾಗಿ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಕೋವಿಡ್ ಕಂಡು ಬರುತ್ತಿದೆ. ಕೆಲಸದ ನಿಮಿತ್ತ ಮಹಾರಾಷ್ಟ್ರ, ಕೇರಳಕ್ಕೆ ಹೋಗುವ ವ್ಯಕ್ತಿಗಳಿಗೆ ಇತರರಿಗೂ ಸೋಂಕು ಹರಡುತ್ತಿದೆ. ಸದ್ಯ ಸೋಂಕು ಕಂಡು ಬಂದ ಸಮುಚ್ಚಯಗಳಲ್ಲಿನ ನಿವಾಸಿಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದ್ದು, ಅತಿ ಹೆಚ್ಚು ಬಳಕೆಯ ಸ್ಥಳಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.
ದೊಮ್ಮಲೂರು ಸಮೀಪದ ರಾಂಕಾ ಕಾನ್ನಾರ್ ಅಪಾರ್ಟ್ಮೆಂಟ್ ನಲ್ಲಿ ಒಂದೇ ದಿನ ಐದು ಜನ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಶೀಘ್ರ ಕಾರ್ಯಪ್ರವೃತ್ತರಾದ ಪಾಲಿಕೆ ಆರೋಗ್ಯಾಧಿಕಾರಿಗಳ ತಂಡ ಇಡೀ ಅಪಾರ್ಟ್ಮೆಂಟ್ನ 80 ಜನರ ಸ್ಯಾಂಪಲ್ ಕಲೆಕ್ಟ್ ಮಾಡಿ ಸಿ ಬ್ಲಾಕ್ ನ ಎಲ್ಲ ಜನರನ್ನ ಕ್ವಾರಂಟೈನ್ಗೂ ಸೂಚಿಸಿದೆ. ಜತೆಗೆ ಅಪಾರ್ಟ್ಮೆಂಟ್ ಕಾಮನ್ ಏರಿಯಾಗೆ ಸಂಪೂರ್ಣ ಸ್ಯಾನಿಟೈಸೇಷನ್ ಸಹ ಮಾಡಲಾಗಿದೆ.
ಇತ್ತ ಏಳು ದಿನಗಳ ಹಿಂದೆ ಯಶವಂತಪುರದ ರೆನೆಸ್ಸಾನ್ ಟೆಂಪಲ್ ಬೆಲ್ಸ್ ಅಪಾರ್ಟ್ಮೆಂಟ್ನಲ್ಲಿಯೂ ಕೊರೊನಾ ಸೋಂಕಿತರು ಕಂಡು ಬಂದಿದ್ದರು. ಇಂದು 153 ಜನರ ಗಂಟಲು ದ್ರವ ಸ್ಯಾಂಪಲ್ ಪಡೆಯಲಾಗಿದೆ. ಜತೆಗೆ ಮುನ್ನಚ್ಚರಿಕೆ ಕ್ರಮವಾಗಿ ಇಡೀ ಅಪಾರ್ಟ್ಮೆಂಟ್ನ ಸಾಮಾನ್ಯ ಬಳಕೆ ಸ್ಥಳಗಳಾದ ಲಿಫ್ಟ್, ಪಾರ್ಕ್, ಪ್ಲೇ ಏರಿಯಾಗಳಲ್ಲಿ ಔಷಧ ಸಿಂಪಡನೆ ಕೆಲಸ ಮಾಡಲಾಯಿತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.