ಬೆಂಗಳೂರು:ರಾಜ್ಯದಲ್ಲಿ ಹಿಂಗಾರು ಮಳೆ ಮುಂದಿನ 24 ಗಂಟೆಗಳ ಕಾಲ ಮುಂದುವರಿಯಲಿದೆ. ಈ ಹಿನ್ನೆಲೆ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. ನಾಳೆಯವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವೆಂಬರ್ 11 ರವೆರೆಗೆ ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ಭಾರಿ ಮಳೆ ಸುರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಹೆಚ್ಚು ಮಳೆಯಾಗಲಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಸಾಧಾರಣ ವರ್ಷಧಾರೆಯ ಸಾಧ್ಯತೆ ಇದೆ ಎಂದಿದೆ.
ತಮಿಳುನಾಡಿನ ಭಾಗದಲ್ಲಿ ಸುಳಿಗಾಳಿ:ತಮಿಳುನಾಡಿನ ಭಾಗದಲ್ಲಿ ಸುಳಿಗಾಳಿ ಮುಂದುವರೆದಿದೆ. ಅದರ ಪರಿಣಾಮ ರಾಜ್ಯದಲ್ಲಿ ಇನ್ನೂ ಎರಡು ದಿನ ಹೆಚ್ಚಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿಗೆ ಮಳೆಯಾಗಲಿದೆ. ಮುಂದಿನ ವಾರ ಬಹುತೇಕ ಹಿಂಗಾರು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಾಳೆ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಯಲ್ಲಿ ಭಾರೀ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ವಾತಾವರಣ ಇರಲಿದೆ ಎಂದಿದ್ದಾರೆ.
ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಬುಧವಾರ ಹವಾಮಾನ ಇಲಾಖೆ ರಾಜ್ಯದ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ, ಉತ್ತರ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿತ್ತು.
ಅವಾಂತರ ಸೃಷ್ಟಿಸಿದ ಮಳೆ: ಕಳೆದೆರಡು ದಿನಗಳಿಂದ ನಿರಂತರವಾಗಿ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನರು ಹೈರಾಣಾಗಿದ್ದರು. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು. ಕೆಲವೊಂದು ಮನೆಗಳಿಗೂ ನೀರು ನುಗ್ಗಿ ಅವಾಂತರಗಳಾಗಿತ್ತು. ಬಯಲು ಸೀಮೆ ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸಿರುವ ಘಟನೆಯೂ ನಡೆದಿತ್ತು.
ಬೆಂಗಳೂರಿನಲ್ಲೂ ಎರಡು ದಿನಗಳಿಂದ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ಹರಿದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರಿನ ಪಶ್ಚಿಮ ವಿಭಾಗದ ನಗರ ಸಶಸ್ತ್ರ ಮೀಸಲು ಪಡೆಯ ಶಸ್ತ್ರಾಸ್ತ್ರ ಸಂಗ್ರಹ ಕೋಣೆಗೆ ಮಳೆ ನೀರು ನುಗ್ಗಿ, ಕೊಠಡಿಯಲ್ಲಿದ್ದ ರೈಫಲ್, ಪಿಸ್ತೂಲ್, ಗನ್ ಸೇರಿದಂತೆ 500ಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳು ಹಾನಿಯಾದ ಘಟನೆ ನಡೆದಿತ್ತು.
ಇದನ್ನೂ ಓದಿ :ರಾಜ್ಯದಲ್ಲಿ ಹಿಂಗಾರು ಮಳೆ ಚುರುಕು: 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ