ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ಮೇ 6 ರಂದು ರಾಜ್ಯ ರಾಜಧಾನಿದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 2 ಹಂತದಲ್ಲಿ ಒಟ್ಟು 37 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. 23 ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ಹಾದು ಹೋಗಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ ಸಿ ಮೋಹನ್ ತಿಳಿಸಿದ್ದಾರೆ.
ಇಂದು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮೇ 6ರ ಶನಿವಾರ ಕರ್ನಾಟಕ ಸಂಕಲ್ಪ ಹೆಸರಲ್ಲಿ ರ್ಯಾಲಿ ನಡೆಸಲಿದ್ದಾರೆ. ಸೋಮವಾರ ವಾರದ ಮೊದಲ ದಿನ ಸಮಸ್ಯೆ ಆಗಲಿದೆ. ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಶನಿವಾರಕ್ಕೆ ಪ್ರೀ ಫೋನ್ ಮಾಡಿಕೊಳ್ಳಲಾಗಿದೆ. ರ‍್ಯಾಲಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು, ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಒಟ್ಟು 37 ಕಿ.ಮೀ ರ‍್ಯಾಲಿ ನಡೆಯಲಿದೆ. ನಮ್ಮ ರ‍್ಯಾಲಿ ಭಾರತ್ ಜೋಡೋ ರ‍್ಯಾಲಿಗಿಂತ ವಿಭಿನ್ನವಾಗಿ ಇರಲಿದೆ. ಮೋದಿ ಅವರಿಗೆ ಆಶೀರ್ವಾದ ಮಾಡಲು 10ಲಕ್ಷ ಜನ ಬರಲಿದ್ದಾರೆ ಎಂದರು.
ಹೆಚ್ಎಎಲ್ ಗೆ ಬರಲಿರುವ ಮೋದಿ ಬಂದು ಅಲ್ಲಿಂದ ಸಿ.ವಿ ರಾಮನ್ ನಗರದಿಂದ ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ತಲುಪಲಿದ್ದಾರೆ. ಬಳಿಕ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ವಿವಿಧ ಕ್ಷೇತ್ರಗಳ ಮೂಲಕ ಮಲ್ಲೇಶ್ವರ ತಲುಪಲಿದ್ದಾರೆ. ಬೆಳಗ್ಗೆ 10.1 ಕಿ.ಮೀ ರ‍್ಯಾಲಿ, ಸಂಜೆ 26.5 ಕಿ.ಮೀ ರ‍್ಯಾಲಿ ನಡೆಯಲಿದೆ ಎಂದು ಪಿಸಿ ಮೋಹನ್ ಹೇಳಿದರು.
ಬಳಿಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪ್ರಧಾನಮಂತ್ರಿಗಳು ನಮ್ಮ ಬೆಂಗಳೂರಿಗೆ ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇದು ಇಡೀ ಜನ ಸಂತೋಷ ಪಡುವ ಕ್ಷಣ. ಐದು ವರ್ಷಕ್ಕೊಮ್ಮೆ ಪ್ರಜಾಪ್ರಭುತ್ವ ಹಬ್ಬದ ಸಂದರ್ಭ. ವಿಶ್ವದ ನಾಯಕ ಬೆಂಗಳೂರಿಗೆ ಬರ್ತಿದ್ದಾರೆ. ಬೆಂಗಳೂರು ಬಿಜೆಪಿ ಭದ್ರಕೋಟೆ. ಬೆಂಗಳೂರಿನ ಸ್ಯಾಟಲೈಟ್ ಟೌನ್ ಶಿಪ್ ನೀಡಿದ್ದಾರೆ. ಏಳು ಕಿ.ಮೀ ಇದ್ದ ಮೆಟ್ರೋ, 75ಕಿ.ಮೀ ಮಾಡಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್ 2 ಮಾಡಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಮೋದಿ ಅಭಿವೃದ್ಧಿ ಕುರಿತು ವಿವರಿಸಿದರು.
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಿಂದ ಜನ ಬಿಜೆಪಿ ಆರಿಸಿ ಕಳಿಸಿದ್ದೀರಾ. ಹಾಗಾಗಿ ಬೆಂಗಳೂರಿನ ಜನತೆಗೆ ಕೃತಜ್ಞತೆ ಸಲ್ಲಿಸಲು ಬರ್ತಿದ್ದಾರೆ. ನೀವು ಬಂದು ಮೋದಿ ಅವರಿಗೆ ಆಶೀರ್ವಾದ ಮಾಡಬಹುದು. ಬೆಂಗಳೂರು ಯಾವ ಕಾರಣಕ್ಕೂ ಟ್ರಾಫಿಕ್ ಜಾಮ್ ಆಗಬಾರದು ಎಂದು ಹೇಳಿದ್ದಾರೆ. ಸಾಧ್ಯವಾದಷ್ಟು ಕಡಿಮೆ ಸಮಸ್ಯೆ ಆಗುವಂತೆ ಮಾಡಿದ್ದೇವೆ ಎಂದರು.