ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ಹಂಚಿಕೆಗೆ ಮಳೆ ಕೊರತೆ/ ವೇಳೆ 'ಶಾಶ್ವತ ಸೂತ್ರ' ರಚಿಸುವ ಸಂಬಂಧ ನಾಲ್ಕೂ ರಾಜ್ಯಗಳ ಹೊರತಾದ ನೀರಾವರಿ, ಕೃಷಿ ಹಾಗೂ ಹೈಡ್ರಾಲಜಿ ತಜ್ಞರ ಭೇಟಿಗೆ ಕೋರಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ತಮ್ಮ ನೇತೃತ್ವದ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಸಾಂವಿಧಾನಿಕ ಅಧಿಕಾರ ನೀಡಲಾಗಿದ್ದು, ಅರೆ ನ್ಯಾಯಿಕ ಅಧಿಕಾರವನ್ನು ನೀಡಿದೆ. ಇದರಿಂದ ನೀವು ನೀಡುವ ನಿರ್ದೇಶನ ಅಥವಾ ಆದೇಶಗಳನ್ನು ನಾಲ್ಕು ರಾಜ್ಯಗಳು ಪಾಲಿಸಲೇಬೇಕಿದ್ದು, ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶ ಮಾಡದೆ ನಿಮ್ಮ ಆದೇಶಗಳನ್ನು ಎತ್ತಿ ಹಿಡಿಯುತ್ತಿದೆ. ಕಾವೇರಿ ಐ ತೀರ್ಪು ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಸಾಮಾನ್ಯ ಮಳೆ ಬಿದ್ದ ವರ್ಷದಲ್ಲಿ ನೀರಿನ ಹಂಚಿಕೆ ಬಗ್ಗೆ ಆದೇಶಿಸಿದೆ. ಆದರೆ ಮಳೆ ಕೊರತೆ ಉಂಟಾದ ವರ್ಷದಲ್ಲಿ ನೀರಿನ ಹಂಚಿಕೆ ಬಗ್ಗೆ ಸ್ಪಷ್ಟ ಆದೇಶ ನೀಡಿಲ್ಲ, ಸಂಕಷ್ಟ ಸೂತ್ರ ರಚಿಸಿಲ್ಲ. ಆದರೆ, ನೀರಿನ ಹಂಚಿಕೆ ಮತ್ತು ಉಂಟಾಗುವ ಸಂಕಷ್ಟದ ಪರಿಸ್ಥಿತಿಯನ್ನು ಅಂದಿನ ಮಟ್ಟಕ್ಕೆ ಅವಲೋಕಿಸಿ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳ ನೀರಿನ ಲಭ್ಯತೆ ಮತ್ತು ಮಳೆ ಪರಿಸ್ಥಿತಿ ಗಮನಿಸಿ ತೀರ್ಮಾನ ಕೈಗೊಳ್ಳಲು ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ ಎಂದು ತಿಳಿಸಿದ್ದಾರೆ.
2018 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ರಚನೆಯಾದ ತಮ್ಮ ನೇತೃತ್ವದ ಪ್ರಾಧಿಕಾರ ಕಳೆದ ಐದು ವರ್ಷಗಳಲ್ಲಿ ವಾಡಿಕೆ ಮಳೆಯಾಗಿದ್ದರಿಂದ ನ್ಯಾಯಾಲಯದ ತೀರ್ಪು ಮತ್ತು ತಮ್ಮ ಆದೇಶಗಳಂತೆ ನಾಲ್ಕು ರಾಜ್ಯಗಳ ಮಧ್ಯ ಯಾವುದೇ ಸಮಸ್ಯೆ ತಲೆದೋರದೆ ನಿಗದಿಪಡಿಸಿದ ನೀರಿಗಿಂತ ಹಚ್ಚಿನ ನೀರು ಜಲಾನಯನ ಪ್ರದೇಶದಲ್ಲಿ ಹರಿದಿದೆ. ಪ್ರಸ್ತುತ, 2023 ರಲ್ಲಿ ವಾಡಿಕೆ ಮಳೆಯಾಗದೆ ಅಗತ್ಯ ನೀರು ಲಭ್ಯವಾಗದೆ ಜಲಾನಯನ ಪ್ರದೇಶದಲ್ಲಿ ಕ್ಷಾಮ ತಲೆದೋರಿದೆ. ಶೇಕಡಾ 50ಕ್ಕಿಂತ ಅಧಿಕ ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಕರ್ನಾಟಕ ಪ್ರದೇಶದ ಜನ ತತ್ತರಿಸಿ ಹೋಗಿದ್ದು, ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ಬಹುತೇಕ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ ಎಂದು ವಿವರಿಸಿದ್ದಾರೆ.
ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡು ತನ್ನ ಪಾಲಿನ ನೀರಿಗೆ ಒತ್ತಡ ಹೇರುತ್ತಿದ್ದು ಅವರ ಬೇಡಿಕೆಯಂತೆ ತಾವು ಕಳೆದ ಎರಡು ತಿಂಗಳಿನಿಂದ ಪ್ರತಿದಿನ ಇಂತಿಷ್ಟು ನೀರು ಹರಿಸುವಂತೆ ಆದೇಶಿಸಿದ್ದು, ಕರ್ನಾಟಕ ಸರ್ಕಾರ ಸಂಕಷ್ಟ ಪರಿಸ್ಥಿತಿಯಲ್ಲೂ ತಮ್ಮ ಆದೇಶವನ್ನು ಪಾಲಿಸುತ್ತ ಬಂದಿದೆ. ಇದರಿಂದ ಕರ್ನಾಟಕ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜನ ಆಕ್ರೋಶಗೊಂಡು ಬೀದಿಗಿಳಿದಿದ್ದು, ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಶಾಲಾ ಮಕ್ಕಳ ವಿದ್ಯಾಭ್ಯಾಸ, ರೈತರ ಬದುಕು ಜರ್ಜರಿತವಾಗಿ ಆತಂಕದ ಸನ್ನಿವೇಶ ಸೃಷ್ಟಿಯಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೂ ಇದರಿಂದ ಗಂಡಾಂತರ ತಲೆದೋರಿದ್ದು ವಿದೇಶಿ ಪ್ರವಾಸಿಗರು ಸೇರಿದಂತೆ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬೀಳುತ್ತಿದೆ ಎಂದು ತಿಳಿಸಿದ್ದಾರೆ.