ಬೆಂಗಳೂರು:ಕೃಷಿ ಪಂಪ್‌ಸೆಟ್‍ಗಳಿಗೆ ಹಗಲು ವೇಳೆ ನಾಲ್ಕು ಗಂಟೆ 3 ಪೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಎಲ್ಲಾ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಆಗ್ರಹಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅವರ ಪ್ರಶ್ನೆಗೆ ಇಂಧನ ಸಚಿವ ವಿ.ಸುನೀಲ್‍ಕುಮಾರ್ ಅವರ ಪರವಾಗಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಉತ್ತರಿಸುತ್ತಿದ್ದ ವೇಳೆ ಹಲವು ಸದಸ್ಯರು ಹಗಲಿನಲ್ಲಿ 4 ಗಂಟೆ, ರಾತ್ರಿ 3 ಗಂಟೆ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿದರು.
ಶಾಸಕ ವೆಂಕಟರಮಣಯ್ಯ ಮಾತನಾಡಿ, ರಾತ್ರಿ ನಾಲ್ಕು ಗಂಟೆ, ಹಗಲಿನಲ್ಲಿ 3 ಗಂಟೆ ವಿದ್ಯುತ್ ಕೊಡಲಾಗುತ್ತಿದೆ ಎಂದಾಗ ಶಿವಾನಂದ ಪಾಟೀಲ್, ಶಾಸಕ ಶರತ್ ಬಚ್ಚೇಗೌಡ ಇದಕ್ಕೆ ದನಿಗೂಡಿಸಿದರು.
ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಿತ್ಯ 7 ಗಂಟೆ ವಿದ್ಯುತ್ ನೀಡುವ ಬದಲು 3ರಿಂದ 4 ಗಂಟೆ ಮಾತ್ರ ನೀಡಲಾಗುತ್ತಿದೆ. ಲೋಡ್ ಶೆಡ್ಡಿಂಗ್ ಇದೆ. ರಾಮನಗರದಲ್ಲಿ ಆನೆ ಹಾವಳಿ ಇದೆ. ಹೀಗಾಗಿ ರಾತ್ರಿ ಬದಲು ಹಗಲಿನಲ್ಲಿ ವಿದ್ಯುತ್ ನೀಡಬೇಕು. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿದ್ದರೂ ಏಕೆ ಲೋಡ್ ಶೆಡ್ಡಿಂಗ್ ಮಾಡುತ್ತೀರಿ ಎಂದಾಗ ಇದಕ್ಕೆ ಹಲವು ಶಾಸಕರು ದನಿಗೂಡಿಸಿದರು.