ಬೆಂಗಳೂರು:ಶಾಸಕ ಜಮೀರ್ ಅಹ್ಮದ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸುಮಾರು 300 ಕೋಟಿ ಮೌಲ್ಯದ ಸ್ವತ್ತನ್ನು ಕಬಳಿಸೋಕೆ ಜಮೀರ್ ಅಹ್ಮದ್ ಮುಂದಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷ ಎನ್ ಆರ್ ರಮೇಶ್ ಆರೋಪಿಸಿದ್ದಾರೆ.
ಶಾಸಕ ಜಮೀರ್ ಅಹ್ಮದ್ ವಿರುದ್ಧ 300 ಕೋಟಿ ಪಾಲಿಕೆ ಆಸ್ತಿ ಕಬಳಿಕೆ ಆರೋಪ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆ ಆರ್ ಮಾರುಕಟ್ಟೆ ವಾರ್ಡ್ ವ್ಯಾಪ್ತಿಗೆ ಬರುವ ಸೂಪರ್ ಟಾಕೀಸ್ ಬಳಿ 1,19,894 ಚದರಡಿ ವಿಸ್ತೀರ್ಣದ ಎರಡು ಎಕರೆ 45 ಗುಂಟೆ ಬಿಬಿಎಂಪಿ ಸ್ವತ್ತು ಖಾಲಿ ಇದೆ. ಈ ಜಾಗವನ್ನು ಬಿಬಿಎಂಪಿ ಇನ್ನೂ ತನ್ನ ಸುಪರ್ದಿಗೆ ಪಡೆದಿಲ್ಲ. ಅದನ್ನು ಕಬಳಿಸಲು ಜಮೀರ್ ಅಹ್ಮದ್ ಹೊಂಚು ಹಾಕಿದ್ದಾರೆ ಎಂದು ರಮೇಶ್ ನೇರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎನ್ ಆರ್ ರಮೇಶ್, 2014ರಲ್ಲಿ ಪೀರ್ ಸೂಫಿ ಸೈಯದ್ ಶಾ ಶಮ್ ಶುಲ್ ಹಕ್ ಎಂಬ ವ್ಯಕ್ತಿ, ಈ ಖಾಲಿ ಜಾಗವು ತಮ್ಮ ಆಸ್ತಿಯೆಂದು ಸಿಟಿ ಸಿವಿಲ್ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಕಚೇರಿಗೂ ದೂರು ನೀಡಿದ್ದರು. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿದಾಗ, 2014ರಲ್ಲಿ ಇದು ಬಿಬಿಎಂಪಿಯ ಸ್ವತ್ತಾಗಿದ್ದು, ಕೂಡಲೇ ಬೇಲಿ ಹಾಕಿ ಜಾಗದ ರಕ್ಷಣೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿತ್ತು.
2015ರಲ್ಲಿ ಸರ್ಕಾರಿ ಆದೇಶದ ನಂತರ, ಬಿಬಿಎಂಪಿ ಕಾಂಪೌಂಡ್ ನಿರ್ಮಾಣ ಮಾಡಲು ಟೆಂಡರ್ ಕರೆದಿತ್ತು. ಆದರೆ, ಅದಾದ ನಂತರ ಸ್ವತ್ತನ್ನು ಸುಪರ್ದಿಗೆ ತೆಗೆದುಕೊಳ್ಳಲು ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದಾರೆ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಅವರ ಬೆದರಿಕೆಗೆ ಹೆದರಿ, ಇವತ್ತಿಗೂ ಜಮೀನನ್ನು ಸುಪರ್ದಿಗೆ ಪಡೆದಿಲ್ಲ. ಬಿಬಿಎಂಪಿಯ ಹಿಂದಿನ ಆಡಳಿತಗಾರರಿಗೆ ಜಮೀರ್, ಸ್ವತ್ತನ್ನ ವಶಪಡಿಸಿಕೊಂಡ್ರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಪರಿಸ್ಥಿತಿ ಚೆನ್ನಾಗಿರಲ್ಲ ಎಂದು ಬೆದರಿಕೆ ಪತ್ರ ಬರೆದಿದ್ದರು.
ಹೀಗಾಗಿ, ಜಮೀರ್ ಆಪ್ತನಾಗಿದ್ದ ನಿವೃತ್ತ ಎಇಇ ತನ್ವೀರ್ ಅಹ್ಮದ್ ಸೇರಿದಂತೆ ಚಾಮರಾಜಪೇಟೆಯ ಎಆರ್ಒ ಅಶೋಕ್, ಇಂಜಿಯರ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಎಂಟಿಎಫ್ ಗೆ ದೂರು ನೀಡಿದ್ದಾರೆ ರಮೇಶ್. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅನಧಿಕೃತವಾಗಿ ಬಿಬಿಎಂಪಿ ಜಾಗ ಒತ್ತುವರಿ ಮಾಡಿಕೊಂಡಿದ್ದು ಗಮನಕ್ಕೆ ಬಂದಿದೆ. ತಕ್ಷಣ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.