ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ಗೃಹಲಕ್ಷ್ಮಿ ಯೋಜನೆ ಉದ್ಘಾಟಿಸಿ 'ಕೈ' ಪಕ್ಷಕ್ಕೆ ಮತ್ತಷ್ಟು ಹತ್ತಿರವಾದ ಎಸ್‌.ಟಿ.ಸೋಮಶೇಖರ್ - ಯಶವಂತಪುರ ವಿಧಾನಸಭಾ ಕ್ಷೇತ್ರ

ಬಿಜೆಪಿ ಶಾಸಕ ಎಸ್.​ಟಿ.ಸೋಮಶೇಖರ್​ ಅವರು ಬಿಬಿಎಂಪಿ ವ್ಯಾಪ್ತಿಯ 5 ವಾರ್ಡ್​ಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರು.

mla-st-somashekhar-launched-grihalakshmi-yojana-in-5-wards-of-bbmp
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಶಾಸಕ ಎಸ್​ಟಿ ಸೋಮಶೇಖರ್​

By ETV Bharat Karnataka Team

Published : Aug 30, 2023, 6:04 PM IST

ಬೆಂಗಳೂರು: ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಂದು ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆ ಗೃಹಲಕ್ಷ್ಮಿ ಜಾರಿಗೆ ಅದ್ಧೂರಿ ಕಾರ್ಯಕ್ರಮ ಮಾಡಿದರು. "ಗೃಹಲಕ್ಷ್ಮಿ ಯೋಜನೆ ಜಾರಿಗೆ ನನ್ನದೂ ಕೂಡಾ ಒಂದು ಅಳಿಲು ಸೇವೆ. ನನ್ನ ಕ್ಷೇತ್ರದಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಲು ಏನೆಲ್ಲ ಕ್ರಮ ವಹಿಸಬಹುದೋ ಅದನ್ನು ಮಾಡುತ್ತಿದ್ದೇನೆ ಅಷ್ಟೇ" ಎಂದು ಸಮರ್ಥನೆ ನೀಡಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮೋಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 17 ಗ್ರಾಮ ಪಂಚಾಯತ್ ಹಾಗೂ 5 ಬಿಬಿಎಂಪಿ ವಾರ್ಡ್‌ಗಳಲ್ಲೂ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಎಸ್.ಟಿ.ಸೋಮಶೇಖರ್ ಸರ್ಕಾರದ ಯೋಜನೆ ಜಾರಿಗೆ ಹೆಚ್ಚು ಕಾಳಜಿ ತೋರಿಸಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗೆ ಕ್ಷೇತ್ರದಲ್ಲಿ 24 ಸಾವಿರ ಬಿಪಿಎಲ್‌ ಸದಸ್ಯರು ಮಾತ್ರ ನೋಂದಣಿ ಮಾಡಿದ್ದಾರೆ. ಯೋಜನೆಯಲ್ಲಿ ಭಾಗವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಬಿಪಿಎಲ್‌ನವರೂ ನೋಂದಣಿ ಆಗಬೇಕು. ಇದರಿಂದ ಪ್ರತಿ ತಿಂಗಳು 2 ಸಾವಿರ ರೂ. ಖಾತೆಗೆ ಬರುತ್ತದೆ. ಎಪಿಎಲ್‌ನವರು 5 ಕೆ.ಜಿ ಅಕ್ಕಿ ತೆಗೆದುಕೊಳ್ಳುವವರಿಗೆ ಮಾತ್ರ ಸಿಗುತ್ತದೆ" ಎಂದು ತಿಳಿಸಿದರು.

"ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮವನ್ನು ಕಾಂಗ್ರೆಸ್ ಶಾಸಕರೇ ಮಾಡಬೇಕು ಅಂತೇನಿಲ್ಲ. ನಮ್ಮ ಕ್ಷೇತ್ರದಲ್ಲಿ 94 ಸಾವಿರ ಕಾರ್ಡ್‌ದಾರರೂ ನೋಂದಣಿ ಆಗಬೇಕು. ಇಲ್ಲವೆಂದರೆ ನಾಳೆ ಜನ ನನ್ನನ್ನು ಕೇಳುತ್ತಾರೆ. ಹಬ್ಬದ ರೀತಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರದ ಯೋಜನೆಯನ್ನು ಎಲ್ಲ ಗೃಹಿಣಿಯರಿಗೂ ತಲುಪಿಸುತ್ತೇನೆ. ಗೃಹಜ್ಯೋತಿ ಯೋಜನೆಯೂ ಸಾಕಷ್ಟು ಜನರಿಗೆ ತಲುಪುತ್ತಿರಲಿಲ್ಲ. ಕೇವಲ 40 ಸಾವಿರ ಜನರಿಗೆ ಅನುಕೂಲ ಆಗುತ್ತಿತ್ತು. ಈಗ 1.9 ಲಕ್ಷ ಜನರಿಗೆ 13 ಕೋಟಿ ರೂ. ಉಳಿತಾಯ ಆಗುತ್ತಿದೆ. ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿ ಮಾಡುತ್ತೇವೆ" ಎಂದರು.

ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೋಮಶೇಖರ್, "ನನ್ನ ಕ್ಷೇತ್ರದಲ್ಲಿ 94 ಸಾವಿರ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ಸಿಗುವಂತಾಗಲು ಜನರಿಗೆ ಮಾಹಿತಿ ಕೊಡುತ್ತಿದ್ದೇವೆ" ಎಂದು ಹೇಳಿದರು. ಇದೇ ವೇಳೆ, ವಿಪಕ್ಷ ಶಾಸಕರಿಂದ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ವಹಿಸುವುದನ್ನು ಸಮರ್ಥಿಸಿಕೊಂಡ ಅವರು, "ನಾನು ಸಹಕಾರ ಸಚಿವನಾಗಿ ಯೋಜನೆ ಜಾರಿ ಮಾಡಿದ್ದೆ. ಅದನ್ನು ಅಂದಿನ ಕಾಂಗ್ರೆಸ್ ಶಾಸಕರೂ ಜನರಿಗೆ ತಲುಪಿಸಿದ್ದರು" ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಎನ್ನುವುದು ಎಡಬಿಡಂಗಿ ಯೋಜನೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆಗೆ ಪ್ರತಿಕ್ರಿಯಿಸಿ, "ದೊಡ್ಡ ದೊಡ್ಡವರು ಏನು ಬೇಕಾದರೂ ಮಾಡಲಿ. ಇದು ನನ್ನ ಕ್ಷೇತ್ರ, ನಮ್ಮ ನಾಯಕರ ಸಭೆ ಮಾಡಿದ್ದೇನೆ. ಇದು ಸರ್ಕಾರದ ಯೋಜನೆ. 94 ಸಾವಿರ ಮಹಿಳೆಯರಿಗೆ ಈ ಯೋಜನೆ ಸಿಗುತ್ತದೆ. ಯಾವೆಲ್ಲ ಕ್ರಮವಹಿಸಬೇಕೋ ಅದನ್ನೆಲ್ಲಾ ನಮ್ಮ ನಾಯಕರಿಗೆ ಹೇಳಿದ್ದೇನೆ. ಅದರ ಪ್ರಕಾರ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರೀತಿಯ ನ್ಯೂನತೆ ನನಗೆ ಕಾಣುತ್ತಿಲ್ಲ" ಎಂದರು.

ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರುತ್ತಿರುವುದರ ಕುರಿತು ಪ್ರತಿಕ್ರಿಯಿಸಿ, "ಆಡಳಿತ ಪಕ್ಷದ ಜತೆ ಇರುವುದು ಕೆಲವರಿಗೆ ಬೇಕಾಗುತ್ತದೆ. ಆಡಳಿತ ಪಕ್ಷದ ಕೈಯಲ್ಲಿ ಮೀಸಲಾತಿ, ಡೀಲಿಮಿಟೇಷನ್ ಇರುತ್ತದೆ. ಮೂರ್ನಾಲ್ಕು ವರ್ಷದಿಂದ ಚುನಾವಣೆ ಇಲ್ಲದ್ದರಿಂದ ಹಾಗೇ ಇರುವುದು ಕಷ್ಟ. ಹಾಗಾಗಿ ಕೆಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಅವರನ್ನು ಬಿಟ್ಟು ಇನ್ನೂ ನೂರಾರು ನಾಯಕರು ನನ್ನ ಜತೆ ಇದ್ದಾರೆ" ಎಂದು ತಿಳಿಸಿದರು.

"ಲೋಕಸಭಾ ಚುನಾವಣೆಗೆ ನಾನು ತಯಾರಿ ಮಾಡುತ್ತಿಲ್ಲ. ಸರ್ಕಾರದ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮವನ್ನು ಜನರಿಗೆ ತಲುಪಿಸುವುದಕ್ಕೆ ಮಾತ್ರವೇ ಸೀಮಿತ ಆಗಿದ್ದೇನೆ. ಯೋಜನೆಗಳ ವಿಚಾರದಲ್ಲಿ ನನಗೆ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಎಂಬ ಭೇದಭಾವವಿಲ್ಲ, ಚುನಾವಣೆ ಸಂದರ್ಭದಲ್ಲಿ ನನ್ನ ಪಾರ್ಟಿ ನನಗೆ ಅವರ ಪಾರ್ಟಿ ಅವರಿಗೆ ಚುನಾವಣೆ ಮುಗಿದ ಮೇಲೆ ಪಕ್ಷ ಭೇದ ಇಲ್ಲ" ಎಂದರು.

ಐದು ವಾರ್ಡ್‌ನಲ್ಲಿ ಯೋಜನೆಗೆ ಚಾಲನೆ:ಯಶವಂತಪುರ ವಿಧಾನಸಭಾ ಕ್ಷೇತ್ರದ 5 ಬಿಬಿಎಂಪಿ ವಾರ್ಡ್ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಎಸ್‌.ಟಿ.ಸೋಮಶೇಖರ್ ಚಾಲನೆ ನೀಡಿದರು. ಅವುಗಳೆಂದರೆ,

1) ದೊಡ್ಡಬಿದರಕಲ್ ವಾರ್ಡ್ 40 - ತಿಪ್ಪೇನಹಳ್ಳಿ ಸಮುದಾಯ ಭವನ.
2) ಹೇರೋಹಳ್ಳಿ ವಾರ್ಡ್ 72 - ಹೇರೋಹಳ್ಳಿ ಸಮುದಾಯ ಭವನ.
3) ಉಲ್ಲಾಳು ವಾರ್ಡ್ 130 - ನಗೆ ಮನೆ ಸಭಾಂಗಣ ಜ್ಞಾನಭಾರತಿ, ನಾಗದೇವನಹಳ್ಳಿ.
4) ಕೆಂಗೇರಿ ವಾರ್ಡ್ 159 - ಶೇಷಾದ್ರಿಪುರಂ ಕಾಲೇಜು ಸಭಾಂಗಣ.
5) ಹೆಮ್ಮಿಗೆಪುರ ವಾರ್ಡ್ 198 - ಮಂಜುನಾಥ ಕಲ್ಯಾಣ ಮಂಟಪ ವಾಜರಹಳ್ಳಿ ಕನಕಪುರ ಮುಖ್ಯ ರಸ್ತೆ.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಆಯ್ಕೆಗೊಂಡಿರುವ ಫಲಾನುಭವಿಗಳು, ಮಾಜಿ ಪಾಲಿಕೆ ಸದಸ್ಯರುಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಲೊಂಡಿದ್ದರು.

ಇದನ್ನೂ ಓದಿ :ಪ್ರತಿ ತಿಂಗಳು 2,000 ರೂಪಾಯಿ; 'ಗೃಹಲಕ್ಷ್ಮಿ'ಯರು ಹೇಳಿದ್ದೇನು?- ವಿಡಿಯೋ

ABOUT THE AUTHOR

...view details