ಬೆಂಗಳೂರು: ಈದ್ಗಾ ಮೈದಾನ ಸರ್ಕಾರಿ ಜಮೀನು ಆಗಿರುವುದರಿಂದ ಗಣೇಶೋತ್ಸವ ನಡೆಯಬೇಕು ಎಂಬ ಒತ್ತಾಸೆ ಇದೆ ಎಂದು ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾಡಿನ ಜನತೆಗೆ ಮುಂಚಿತವಾಗಿ ಗಣೇಶೋತ್ಸವ ಹಾರ್ದಿಕ ಶುಭಾಶಯ. ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತೋ, ಇಲ್ವಾ ಅನ್ನೋ ಜಿಜ್ಞಾಸೆ ಇತ್ತು. ಅದು ಸರ್ಕಾರದ ಜಮೀನು ಆಗಿರೋದ್ರಿಂದ ನಾಗರಿಕರ ಒತ್ತಾಸೆ ಮೇರೆಗೆ ಗಣೇಶೋತ್ಸವ ನಡೆಯಬೇಕು ಅನ್ನೋ ಒತ್ತಾಸೆ ಇದೆ. ಬಿಜೆಪಿ ಧಾರ್ಮಿಕ ಭಾವನೆಗೆ ಬೆಲೆ ಕೊಡಲಿದೆ. ಸರ್ಕಾರ ಕೂಡ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಸ್ಪಂದಿಸಿ ಆಚರಣೆಗೆ ಅನುಮತಿಗೆ ಕೊಡಲಿದೆ. ನಾವೂ ಕೂಡ ಶ್ರದ್ಧಾ ಭಕ್ತಿಗೆ ಹೆಚ್ಚು ಬೆಂಬಲ ಕೊಡ್ತೀವಿ ಎಂದರು.
ಹುಬ್ಬಳ್ಳಿಯಲ್ಲಿ ಕೂಡ ಗಣೇಶೋತ್ಸವ ಆಚರಣೆಗೆ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಸಮಿತಿ ಕೂಡ ಒಪ್ಪಿಗೆ ಕೊಡುತ್ತೆ ಅಂತ ಭಾವಿಸಿದ್ದೇವೆ. ತಿಲಕರು ಕೂಡ ದೇಶದ ಒಗ್ಗೂಡುವಿಕೆಗೆ ಗಣೇಶ ಕೂರಿಸಿದ್ರು. ಇಂದು ಯಾವುದೋ ಒಂದು ಮತೀಯರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಒಂದು ಕಾಲದಲ್ಲಿ ದೇಶವನ್ನು ಆಳುತ್ತಿದ್ದ ಕಾಂಗ್ರೆಸ್, ಎರಡು ರಾಜ್ಯದಲ್ಲಿ ಮಾತ್ರ ಆಡಳಿತ ಮಾಡುವ ಸ್ಥಿತಿಗೆ ಬಂದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಅಂತ ಘೋಷಣೆ ಮಾಡಿದ್ರು. ಅದರಂತೆ ಇಂದು ಕಾಂಗ್ರೆಸ್ ನೆಲ ಕಚ್ಚುತ್ತಿದೆ ಎಂದು ಹೇಳಿದರು.